ಸ್ಕೂಟರ್ ಡೆಲಿವರಿ ಹೆಸರಿನಲ್ಲಿ 57 ಸಾವಿರ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
ಉಡುಪಿ, ಜ.16: ಸ್ಕೂಟರ್ ಡೆಲಿವರಿ ಹೆಸರಿನಲ್ಲಿ ಯುವಕನೋರ್ವನಿಗೆ ಸಾವಿರಾರು ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೂರಿನ ಅಕ್ಕಸಾಲಿ ಶಶಿಧರ್(28) ಎಂಬವರು ಫೇಸ್‌ಬುಕ್‌ನಲ್ಲಿ ಮಾರ್ಕೆಟ್ ಪ್ಲೇಸ್ ಎಂಬ ಆಯ್ಕೆಯಲ್ಲಿ ವಿವಿಧ ಬಗೆಯ ಸ್ಕೂಟರ್ ಮತ್ತು ಬೈಕ್‌ಗಳ ಚಿತ್ರಗಳಿದ್ದು, ಅದರಲ್ಲಿ ಒಂದು ಸ್ಕೂಟರ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆಯಿತು. ಅದರಲ್ಲಿ ಅಪರಿಚಿತ ವ್ಯಕ್ತಿಯು ತನ್ನ ಹೆಸರು ಪ್ರದೀಪ್ ಕುಮಾರ್ ಎಂಬುದಾಗಿ ಹೇಳಿಕೊಂಡು ಸ್ಕೂಟರ್ ವಿಚಾರದಲ್ಲಿ ಮಾತುಕತೆ ನಡೆಸಿದ್ದನು.
ಅಕ್ಕಸಾಲಿ ಶಶಿಧರ್ ಖರೀದಿಸಿದ ಸ್ಕೂಟರ್‌ಗೆ ಸಂಬಂಧಪಟ್ಟ ದಾಖಲೆ ಸಿದ್ಧ ಪಡಿಸಲು 1950ರೂ. ಕಳುಹಿಸುವಂತೆ ಜ.6ರಂದು ಪ್ರದೀಪ್ ಕುಮಾರ್ ತಿಳಿಸಿದ್ದು, ಅದನ್ನು ನಂಬಿದ ಶಶಿಧರ್, ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿ ದ್ದರು. ಅನಂತರ ಪ್ರದೀಪ್ ಕುಮಾರ್, ಸ್ಕೂಟರ್ ಪಡೆಯಲು ಡೆಲಿವರಿ ಚಾರ್ಜ್, ಜಿಪಿಎಸ್ ಚಾರ್ಜ್ ಮತ್ತು ಇತರೇ ಚಾರ್ಜ್‌ನ್ನು ನೀಡಬೇಕೆಂದು ಹೇಳಿದಂತೆ ಶಶಿಧರ್ ಒಟ್ಟು 57,450ರೂ. ಹಣ ಪಾವತಿಸಿದ್ದರು. ಆದರೆ ಆರೋಪಿ ಈವರೆಗೂ ಯಾವುದೇ ಸ್ಕೂಟರ್ ಡೆಲಿವೆರಿ ಮಾಡದೇ, ಹಣ ವಾಪಸ್ಸು ಹಿಂತಿರುಗಿಸದೇ ಆನ್‌ಲೈನ್‌ನಲ್ಲಿ ಮೋಸ ಮಾಡಿರುವುದಾಗಿ ದೂರಲಾಗಿದೆ.