×
Ad

ಪದ್ಮಶ್ರೀ ಮಂಜಮ್ಮ ಜೋಗತಿ ಜೀವಾನಾಧಾರಿತ ಮಾತಾ ಏಕವ್ಯಕ್ತಿ ನಾಟಕ ಪ್ರದರ್ಶನ

Update: 2023-09-04 20:37 IST

ಉಡುಪಿ: ತೃತೀಯ ಲಿಂಗಿಯಾಗಿ ನಿರಂತರ ಸಂಘರ್ಷ ಜೀವನ ನಡೆಸಿ, ತನ್ನಂತಹ ಶೋಷಿತರ ಧ್ವನಿಯಾದ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಅವರಂತಹ ತೊಳಲಾಟದ ಮಂದಿಗೆ ಜೀವನ ಪಾಠವಾಗಿದೆ ಎಂದು ಹೇಳಿದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ಡಾ.ಮಂಜಮ್ಮ ಜೋಗತಿ ಜೀವಾನಾಧಾರಿತ ಏಕವ್ಯಕ್ತಿ ನಾಟಕ ‘ಮಾತಾ ’ ಪ್ರದರ್ಶನ ಕಾರ್ಯಕ್ರಮ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿ, ತೃತೀಯ ಲಿಂಗಿಗಳು ತಮ್ಮಿಷ್ಟದ ಬದುಕನ್ನು ಬಾಳುವ ಅವಕಾಶ ಸಮಾಜ ಕಲ್ಪಿಸಬೇಕು. ತೃತೀಯ ಲಿಂಗಿಗಳಿಗೆ ಗೌರವ ಕೊಡಿ. ತಿರಸ್ಕಾರ ಮಾಡಬೇಡಿ. ಶಿಕ್ಷಣ, ಉದ್ಯೋಗ ನೀಡಿ ಅವರನ್ನು ಸಮಾ ಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಸಮಾಜದಿಂದ ನಡೆಯಬೇಕು. ನಾವು ಯಾವುದೇ ತಪ್ಪು ಮಾಡಿಲ್ಲ. ಸಮಾಜ ನಮ್ಮನ್ನು ಒಪ್ಪಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸಮಾನತೆ, ಗೌರವಯುತವಾಗಿ ಜೀವನ ನಡೆಸಲು ಉದ್ಯೋಗಾ ವಕಾಶಗಳು ಸಿಗಬೇಕು. ಅವರದಲ್ಲದ ತಪ್ಪಿಗೆ ಅವರ ಬದುಕು ಹೊರೆಯಂತೆ ಅನಿಸಬಾರದು. ಈ ನಿಟ್ಟಿನಲ್ಲಿ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಒಂದು ಆದರ್ಶಪ್ರಾಯ ಎಂದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿದರು. ರೋಟರಿ ಜಿಲ್ಲೆ ೩೧೮೨ ಜಿಲ್ಲಾ ಮಾಜಿ ಗವರ್ನರ್ ಡಾ.ಎಚ್.ಜೆ.ಗೌರಿ, ರೋಟರಿ ಉಡುಪಿ ಅಧ್ಯಕ್ಷೆ ದೀಪಾ ಭಂಡಾರಿ ಮಾತನಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಉಪಸ್ಥಿತರಿದ್ದರು.

ನಾಟಕದ ರಚನೆಕಾರ ಬೇಲೂರು ರಘುನಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸರಸ್ವತಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಕೆ.ಸ್ವರಾಜ್ಯ ಲಕ್ಷ್ಮೀ ಅಲೆವೂರು ವಂದಿಸಿದರು. ಜಯಭಾರತಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲಾವಿದ ಅರುಣ್ ಕುಮಾರ್ ಅವರ ಏಕವ್ಯಕ್ತಿ ಅಭಿನಯದಲ್ಲಿ ‘ಮಾತಾ’ ನಾಟಕ ಪ್ರದರ್ಶನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News