ಪಡುಬಿದ್ರೆ ಗ್ರಾಪಂ ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು
ಪಡುಬಿದ್ರೆ: ಪಡುಬಿದ್ರಿ ಗ್ರಾಮ ಪಂಚಾಯತ್ ನ ಪಾದೆಬೆಟ್ಟು ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾ ಗೆಲುವು ಸಾಧಿಸಿದ್ದಾರೆ.
ಇಂದು ಕಾಪುವಿನ ಪ್ರಜಾ ಸೌಧದಲ್ಲಿ ಮತ ಎಣಿಕೆ ನಡೆದಿದ್ದು, ಆಶಾ 518 ಮತಗಳನ್ನು ಗಳಿಸಿ ವಿಜಯಿಯಾದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಷಾ 202 ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಕುಂತಲಾ 19 ಮತಗಳನ್ನು ಪಡೆದರು. ತಹಶೀಲ್ದಾರ್ ಪ್ರತಿಭಾ ಆರ್. ವಿಜೇತ ಅಭ್ಯರ್ಥಿ ಆಶಾರನ್ನು ಅಭಿನಂದಿಸಿದರು.
ಈ ಹಿಂದೆ ಪಡುಬಿದ್ರೆ ಗ್ರಾಮ ಪಂಚಾಯತ್ ನ ಪಾದೆಬೆಟ್ಟು ವಾರ್ಡ್ ನ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದ ಶಿವಮ್ಮ ನಿಧನರಾದ ಹಿನ್ನೆಲೆಯಲ್ಲಿ ಮೇ 25ರಂದು ಉಪ ಚುನಾವಣೆ ನಡೆದಿತ್ತು. ಈ ವಾರ್ಡ್ ನಲ್ಲಿ ಒಟ್ಟು 1,332 ಮತದಾರರಿದ್ದು, ಉಪ ಚುನಾವಣೆಯಲ್ಲಿ 739 ಮತಗಳು ಚಲಾವಣೆಯಾಗಿತ್ತು. ಅವುಗಳಲ್ಲಿ 7 ಮತಗಳು ತಿರಸ್ಕೃತಗೊಂಡಿತ್ತು.
ಸಂಭ್ರಮ: ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಆಶಾ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಡುಬಿದ್ರೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.