×
Ad

ಸಂವಿಧಾನಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸಿ: ಅಮಿತ್ ಸಿಂಗ್ ಕರೆ

ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ

Update: 2026-07-13 20:54 IST

ಉಡುಪಿ: ಪೊಲೀಸರು ತಮ್ಮ ವೃತ್ತಿಯ ಸಂದರ್ಭದಲ್ಲಿ ಯಾವತ್ತೂ ಸಂವಿಧಾನವನ್ನು ಎತ್ತಿ ಹಿಡಿಯುವುದರೊಂದಿಗೆ ಕಾನೂನು ಪಾಲನೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಹೇಳಿದ್ದಾರೆ.

ನಗರದ ಡಿಎಆರ್ ಚಂದು ಮೈದಾನದಲ್ಲಿ ಉಡುಪಿ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸಶಸ್ತ್ರ ಮೀಸಲು ಪೊಲೀಸ್ ಕಾನ್ ಸ್ಟೇಬಲ್‌ಗಳ 14ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ವೃತ್ತಿಯಲ್ಲಿ ಶ್ರದ್ಧೆ, ಜನರ ಜೊತೆಗೆ ಉತ್ತಮ ಸಂಪರ್ಕ, ಜ್ಞಾನ ವನ್ನು ಹೊಂದಿರುವ ಮೂಲಕ ಕರ್ತವ್ಯ ನಿರ್ವಹಿಸಬೇಕು. ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವಾಗ ವೃತ್ತಿಪರತೆ ಮತ್ತು ತಾಳ್ಮೆಯಿಂದ ವರ್ತಿಸಬೇಕಾಗು ತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ತಾಳ್ಮೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಹೊಸದಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುವವರಿಗೆ ಕಿವಿಮಾತು ಹೇಳಿದರು.

ತರಬೇತಿ ಶಾಲೆಯ ಪ್ರಾಂಶುಪಾಲ ಸುಧಾಕರ ನಾಯ್ಕ್ ಮಾತನಾಡಿ ತರಬೇತಿ ಪಡೆದಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಮಾಜಿ ಸೈನಿಕರು ಸೇರಿದಂತೆ ಉನ್ನತ ಪದವಿ ವಿದ್ಯಾಭ್ಯಾಸ ಹೊಂದಿದವರು ಕೂಡ ಸೇರಿದ್ದಾರೆ. ಹತ್ತು ತಿಂಗಳ ಅವಧಿಯಲ್ಲಿ ಕಾನೂನು, ಕಂಪ್ಯೂಟರ್, ಮಾನಸಿಕ ಸ್ವಾಸ್ಥ್ಯ ಹಾಗೂ ಇತರೆ ಪ್ರಚಲಿತ ವಿಷಯಗಳಲ್ಲಿ ಬೋಧನೆ, ದೈಹಿಕ ಶಿಕ್ಷಣ, ಯೋಗ, ಕರಾಟೆ, ಕವಾಯತು ಹಾಗೂ ವಿವಿಧ ಶಸ್ತ್ರ ತರಬೇತಿಯನ್ನು ನೀಡಲಾಗಿದೆ ಎಂದರು.

ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಮತ್ತು ಫೈರಿಂಗ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ ಶಿವಪ್ಪ ಚೆನ್ನಬಸಪ್ಪ ಇಟ್ನಾಳ್ ಅವರಿಗೆ ಸರ್ವಾಂಗೀಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಳಾಂಗಣ ವಿಭಾಗದಲ್ಲಿ ಶಿವಪ್ಪ ಹಿತ್ನಾಳ್ ಪ್ರಥಮ, ಭುವನೇಶ ಕೆ.ಸಿ. ದ್ವಿತೀಯ ಸ್ಥಾನ ಪಡೆದರೆ, ಅಮರೇಶ್ ಪರಶುರಾಮ ಬೋಳ ಶೆಟ್ಟಿ ತೃತೀಯ ಸ್ಥಾನ ಪಡೆದರು. ತರಬೇತಿಯ ಹೊರಾಂಗಣ ವಿಭಾಗದಲ್ಲಿ ಮಂಜುನಾಥ ಕರಿಯಪ್ಪ ದೊಡ್ಡಮನಿ ಪ್ರಥಮ, ರುದ್ರೇಗೌಡ ದ್ವಿತೀಯ ಹಾಗೂ ಮನೋಜ್ ಕೆ. ತೃತೀಯ ಸ್ಥಾನ ಪಡೆದರು.

ಗುರಿಪರೀಕ್ಷೆ ತರಬೇತಿಯಲ್ಲಿ ರೇಣುಕಾ ಪ್ರಸಾದ್ ಪಿ.ವಿ. ಪ್ರಥಮ, ಪಾಂಡುರಂಗ ಮಹಾದೇವಪ್ಪ ದೊಡ್ಡಮನೆ ಹಾಗೂ ಸಂಗಮೇಶ ಮೇಟಿ ದ್ವಿತೀಯ ಸ್ಥಾನ ಹಂಚಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ವಾಗತಿಸಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ವಂದಿಸಿದರು.ಎಸಿಪಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.





 


 


 




 



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News