×
Ad

ಬ್ರಹ್ಮಾವರದಲ್ಲಿ ಸಸ್ಯಮೇಳ, ಆಹಾರೋತ್ಸವ ಉದ್ಘಾಟನೆ

Update: 2023-08-13 18:44 IST

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ೩೫೦ಎಕರೆ ಜಾಗವಿದ್ದು, ಅಲ್ಲಿ ಕೃಷಿ ಚಟುವಟಿ ಕೆಗೆ ಪೂರಕವಾಗಲು ಮತ್ತು ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೃಷಿ ಕಾಲೇಜು ಆರಂಭಿಸುವ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಬ್ರಹ್ಮಾವರ ರೋಟರಿ ರಾಯಲ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ, ನಿರ್ಮಲಾ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಮತ್ತು ನಿರ್ಮಲ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಬೃಹತ್ ಸಸ್ಯಮೇಳ ಮತ್ತು ಆಹಾರೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಇದೇ ಸಂದರ್ಭ ಪರಿಸರದ ಪ್ರಗತಿಪರ ಕೃಷಿಕರಾದ ವೆಂಕಟರಮಣ ಸಾಮಂತ್, ಕೋಟ ಹಂದಟ್ಟಿನ ಜಾನಕಿ ಹಂದೆ, ಹಾರಾಡಿಯ ಯೋಗೀಶ ಆಚಾರ್ಯ, ಕರ್ಜೆಯ ಸೋಮ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ರೋಟರಿಯ ಜಿಲ್ಲಾ ಗವರ್ನರ್ ದೇವಾನಂದ, ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಧನಂಜಯ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ರೋಟರಿಯ ಸಹಾಯಕ ಗವರ್ನರ್ ಅಲ್ವಿನ್ ಎಸ್.ಕ್ವಾಡ್ರಸ್, ವಲಯ ಸೆನಾನಿ ರಾಜಾರಾಮ ಐತಾಳ, ನಿರ್ಮಲಾ ಪ್ರೌಢಶಾಲೆಯ ಸಂಚಾಲಕಿ ಸಿಸ್ಟರ್ ಫ್ಲೋರಿನ್ ಡಿಸೋಜ, ಮುಖ್ಯ ಶಿಕ್ಷಕಿ ಟೀನಾ ಲಸ್ರಾಡೋ, ರೋಟರಿಯ ಬಿ.ಎಸ್.ಭಟ್, ರಾಜಾರಾಮ ಭಟ್, ವಿಜಯೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಜ್ಞಾನವಸಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಅಭಿರಾಮ ನಾಯಕ್ ಸ್ವಾಗತಿಸಿದರು. ಶ್ರೀಕಾಂತ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.

ನಂತರ ಮಣ್ಣಿನ ಸಂರಕ್ಷಣೆ ಮತ್ತು ಫಲವತ್ತತೆ, ಸಸಿಗಳ ಸಂರಕ್ಷಣೆ, ಪೋಷಣೆ, ಮತ್ತು ಕೈತೋಟದ ಬಗ್ಗೆ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಜಯಪ್ರಕಾಶ್ ಮತ್ತು ಡಾ.ಚೈತನ್ಯ ಎಚ್.ಎಸ್. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹ ನಿರ್ದೇಶಕ ಗುರುಪ್ರಸಾದ್ ತೋಟಗಾರಿಕಾ ಇಲಾಖೆಯ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News