×
Ad

ನ.28 ರಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ: ಪುತ್ತಿಗೆಶ್ರೀ

Update: 2025-11-06 20:50 IST

ಉಡುಪಿ: ತಮ್ಮ ಚತುರ್ಥ ವಿಶ್ವ ಗೀತಾ ಪರ್ಯಾಯದ ಕೊನೆಯ ಮೂರು ತಿಂಗಳಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ನ.8ರಿಂದ ಡಿ.7ರವರೆಗೆ ಗೀತಾ ಜಯಂತಿ ಪ್ರಯುಕ್ತ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ನ.28ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಲಕ್ಷ ಕಂಠ ಗೀತಾಪಾರಾಯಣ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಗೀತಾಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.8ರಂದು ಸಂಜೆ 4:30ಕ್ಕೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೀತೋತ್ಸವವನ್ನು ಉದ್ಘಾಟಿಸಲಿದ್ದಾರೆ. ಒಂದು ತಿಂಗಳ ಕಾಲ ನಡೆಯುವ ಬೃಹತ್ ಗೀತೋತ್ಸವದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ, ಸಂತ ಸಂಗಮ, ಭಜನೋತ್ಸವ, ಸಂತ ಸಂದೇಶ, ಸಂತ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಪ್ರಧಾನಿ ಹುದ್ದೆಗೇರಿದ ಬಳಿಕ ಮೊದಲ ಬಾರಿ ಉಡುಪಿಗೆ: 2008ರಲ್ಲಿ ತಮ್ಮ ತೃತೀಯ ಪರ್ಯಾಯ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ನರೇಂದ್ರ ಮೋದಿ ಅವರು ಇದೀಗ 16 ವರ್ಷಗಳ ಬಳಿಕ ಮೊದಲ ಬಾರಿ ಪ್ರಧಾನಿಯಾಗಿ ಕೃಷ್ಣ ದರ್ಶನಕ್ಕೆ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ನ.28ರಂದು ಬೆಳಗ್ಗೆ 9ರಿಂದ ಅಪರಾಹ್ನ 12:30ರವರೆಗೆ ಬೈಲಕೆರೆ ಮೈದಾನದಲ್ಲಿ ಲಕ್ಷ ಕಂಠ ಗೀತಾಪಾರಾಯಣ ಕಾರ್ಯಕ್ರಮ ನಡೆಯಲಿದ್ದು, ಅಪರಾಹ್ನ 12 ಗಂಟೆಗೆ ಪ್ರಧಾನಿ ಕೃಷ್ಣ ಮಠಕ್ಕೆ ಆಗಮಿಸಿ, ಕೃಷ್ಣ, ಮುಖ್ಯಪ್ರಾಣರ ದರ್ಶನದ ಬಳಿಕ ಸುವರ್ಣ ತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ಚಿನ್ನದ ಕನಕ ಕವಚವನ್ನು ಉದ್ಘಾಟಿಸಲಿದ್ದಾರೆ. ನಂತರ ಗೀತಾಮಂದಿರವನ್ನು ವೀಕ್ಷಿಸಿ ಸಭಾ ವೇದಿಕೆಗೆ ಆಗಮಿಸಲಿದ್ದಾರೆ. ಗೀತೆಯ ಕೊನೆಯ 10 ಶ್ಲೋಕಗಳನ್ನು ಪಠಿಸುವ ಮೂಲಕ ಪಾರಾಯಣವನ್ನು ಕೃಷ್ಣನಿಗೆ ಸಮರ್ಪಿಸಲಿದ್ದಾರೆ ಎಂದರು.

ವೇದಿಕೆಯಲ್ಲಿ ಶ್ರೀಮಠದ ವತಿಯಿಂದ ಪ್ರಧಾನಿಯವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ಅಶ್ವಿನಿ ಶೇಖಾವತ್ ಮೊದಲಾದವರು ಉಪಸ್ಥಿತರಿರುವರು ಎಂದು ಸ್ವಾಮೀಜಿ ಹೇಳಿದರು.

ನ.9ರಂದು ಬೆಳಗ್ಗೆ 10ಕ್ಕೆ ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ, ಸಂಜೆ 5ಕ್ಕೆ ವಿದ್ಯಾಮಾನ್ಯ ತೀರ್ಥರ ಪೀಠಾರೋಹಣ ಶತಮಾನೋತ್ಸವ, ನ.11ರಿಂದ 28ರವರೆಗೆ 18 ದಿನಗಳ ಗೀತಾ ಪ್ರವಚನ ಶತಾವಧಾನಿ ಡಾ.ಯು. ರಮನಾಥಾಚಾರ್ಯರಿಂದ ನಡೆಯಲಿದೆ. ನ.29ರಂದು 18ಕುಂಡಗಳಲ್ಲಿ ಗೀತಾ ಮಹಾಯಾಗ ನಡೆಯಲಿದೆ ಎಂದರು.

ಸಂತ ಸಂಗಮ: ನ.30ರಂದು ಸಂಜೆ 4ಕ್ಕೆ ಸಾಮೂಹಿಕ ಗೀತಾ ಪಾರಾಯಣ ಮತ್ತು ಭಜನೋತ್ಸವವನ್ನು ಆಯೋಜಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದಕ್ಕೆ ವಿಶೇಷ ಆಹ್ವಾನಿತರಾ ಗಿದ್ದಾರೆ. ಡಿ.1ರಂದು ಗೀತಾ ಜಯಂತಿ ಅಂಗವಾಗಿ ಸಾಮೂಹಿಕ ಪಾರಾಯಣ, ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತಿಗೆ ಶ್ರೀ ವಿವರಿಸಿದರು.

ಡಿ.7ರಂದು ಪುತ್ತಿಗೆ ವಿದ್ಯಾಪೀಠದ 38ನೇ ಘಟಿಕೋತ್ಸವ, ಗೀತಾಭಾಷ್ಯ ಪಾಠದ ಮಂಗಲೋತ್ಸವ, ಸಂಜೆ 5ಕ್ಕೆ ಗೀತೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತಿಗೆ ಮಠದ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News