×
Ad

ಪಿಎಂಇಜಿಪಿ ಯೋಜನೆ| 11.96 ಕೋಟಿ ರೂ.ಮಾರ್ಜಿನ್ ಹಣ ಬಾಕಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

Update: 2025-12-30 19:30 IST

ಉಡುಪಿ, ಡಿ.30: ಸಣ್ಣ, ಅತಿಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದಡಿ (ಪಿಎಂಇಜಿಪಿ) ಜಿಲ್ಲೆಯಲ್ಲಿ ಫಲಾನುಭವಿಗಳ 526 ಘಟಕಗಳಿಗೆ 2027.55 ಲಕ್ಷ ರೂ. ಮಾರ್ಜಿನ್ ಹಣ ಬಿಡುಗಡೆಯಾಗಬೇಕಿದ್ದು, ಈವರೆಗೆ 222 ಘಟಕಗಳಿಗೆ 831.12 ಲಕ್ಷ ರೂ. ಮಾತ್ರ ಬಿಡುಗಡೆ ಯಾಗಿದೆ. ಬಾಕಿ ಉಳಿದ 304 ಘಟಕಗಳಿಗೆ 1196.43 ಲಕ್ಷ ರೂ. ಮಾರ್ಜಿನ್ ಹಣ ಶೀಘ್ರದಲ್ಲಿ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ, ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆ, ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ ಡಿ.ಎಲ್.ಎಂ.ಸಿ ಸಭೆ ಹಾಗೂ ಪಿ.ಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಲ್ಲಿ ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಘಟಕ ಆರಂಭಿಸಲು ಮುಂದೆ ಬರುವ ನವ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಉದ್ಯಮಿಗಳಾಗಿ ಹೊರಹೊಮ್ಮಲು ಅವಕಾಶಮಾಡಿ ಕೊಡಬೇಕು. ಜಿಲ್ಲೆಯಲ್ಲಿ ರಫ್ತು ಉದ್ಯಮವನ್ನು ಉತ್ತೇಜಿಸಲು ಎಕ್ಸ್‌ಪೋರ್ಟ್ ಇನ್ಸ್‌ಪೆಕ್ಷನ್ ಏಜೆನ್ಸಿ ಅಧಿಕಾರಿಯನ್ನು ಶೀಘ್ರವಾಗಿ ನಿಯೋಜಿಸಬೇಕು ಎಂದರು.

ಹೊಸದಾಗಿ ನಿವೇಶನ ಕೋರಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿದಾರರ ಜಾಗದ ಬೇಡಿಕೆಯು 2 ಎಕ್ರೆಗಿಂತ ಕಡಿಮೆ ಇದ್ದು, ಯೋಜನಾ ವೆಚ್ಚವೂ 15 ಕೋಟಿಗಿಂತ ಕಡಿಮೆ ಇದ್ದಲ್ಲಿ ಜಿಲ್ಲಾಮಟ್ಟದಲ್ಲಿ ಚರ್ಚಿಸಿ ನಿವೇಶನ ಹಂಚಿಕೆಗೆ ಅನುವು ಮಾಡಿಕೊಡಬೇಕು. ನಿವೇಶನ ಲಭ್ಯವಿಲ್ಲದಿದ್ದಲ್ಲಿ ಹೆಚ್ಚುವರಿ ಜಾಗ ನೀಡುವಂತೆ ಆಯುಕ್ತರಿಗೆ ಪತ್ರ ಬರೆಯ ಬೇಕು ಎಂದ ಅವರು, ಹೊಸದಾಗಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರ ಪಟ್ಟಿ ನೀಡುವಂತೆ ತಿಳಿಸಿದರು.

ಗಡಿ ಗುರುತಿಸಿ: ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಹೆಬ್ರಿ ತಾಲೂಕು ಶಿವಪುರದಲ್ಲಿ 74.84 ಎಕ್ರೆ ಹಾಗೂ ಕೆರೆಬೆಟ್ಟುನಲ್ಲಿ 38.75 ಎಕ್ರೆ ಖಾಸಗಿ ಹಾಗೂ ಸರಕಾರಿ ಜಮೀನು ಸೇರಿದಂತೆ ಒಟ್ಟು 113.59 ಎಕ್ರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಈಗಾಗಲೇ ಕೆ.ಐ.ಎ.ಡಿ.ಬಿ ಅಭಿಯಂತರರಿಗೆ ಸೂಚಿಸಲಾಗಿದೆ. ಇವುಗಳಲ್ಲಿ 36.56 ಎಕ್ರೆ ಸರಕಾರಿ ಜಮೀನು ಮಂಜೂರು ಮಾಡಲು ಗುರುತಿಸಿರುವ ಕೆಲವು ಸರ್ವೇ ನಂಬರ್‌ಗಳು ಅರಣ್ಯ ಹಾಗೂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುವ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ, ವರದಿ ನೀಡುವಂತೆ ತಿಳಿಸಿದರು.

ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆದ್ಯತೆಯ ಮೇಲೆ ಕೈಗೊಂಡು, ಒಂದು ತಿಂಗಳ ಒಳಗೆ ಪರಿಹಾರ ಧನವನ್ನು ಸಂತ್ರಸ್ತರಿಗೆ ಹಸ್ತಾಂತರಿಸಬೇಕು. ಪರಿಹಾರ ಪಡೆಯಲು ಹಿಂದೇಟು ಹಾಕುವ ಭೂ ಮಾಲಕರಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನ್ಯಾಯಾಲಯ ದಲ್ಲಿ ಠೇವಣಿ ಇರಿಸುವುದರೊಂದಿಗೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.

ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ಕೈಗಾರಿಕಾ ವಸಾಹತುನಲ್ಲಿ ಖಾಲಿ ಇರುವ ಮಳಿಗೆ ಹಾಗೂ ನಿವೇಶನಗಳ ಹಂಚಿಕೆ ಮಾಡುವ ಕುರಿತು ಪ್ರಕಟಣೆ ಹೊರಡಿಸಿ, ಶೀಘ್ರದಲ್ಲಿ ಹಂಚಿಕೆ ಮಾಡಲು ಕ್ರಮವಹಿಸಬೇಕು ಎಂದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ವತಿಯಿಂದ ಪಿ.ಎಂ.ವಿಶ್ವಕರ್ಮ ಯೋಜನೆ 6307ಫಲಾನುಭವಿಗಳಿಗೆ ಈಗಾಗಲೇ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ. 3992 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಸೌಲಭ್ಯ ಮಂಜೂರಾಗಿದ್ದು, 3675 ಫಲಾನುಭವಿಗಳ ಖಾತೆಗೆ ಆರ್ಥಿಕ ಸಹಾಯಧನವನ್ನು ಪಾವತಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಈ ಯೋಜನೆ ಯಡಿ ಆಯ್ಕೆಯಾದವರಿಗೆ ಕೌಶಲ್ಯ ತರಬೇತಿಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ನೀಡುವುದರ ಜೊತೆಗೆ ಬ್ಯಾಂಕ್‌ಗಳು ಆದ್ಯತೆಯ ಮೇಲೆ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಕಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

‘ಡಾ.ಸರೋಜಿನಿ ಮಹಿಷಿ ವರದಿಯಂತೆ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಸಣ್ಣ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡಿ, ಕೆಲಸಕ್ಕೆ ನಿಯೋಜಿಸಬೇಕು ಎಂಬ ನಿಯಮವಿದೆ. ಕೇವಲ ಡಿ ಗ್ರೂಪ್ ಹುದ್ದೆಗೆ ಮಾತ್ರವಲ್ಲದೇ ಎಲ್ಲಾ ಹುದ್ದೆಗಳಲ್ಲಿಯೂ ಸ್ಥಳೀಯರ ನೇಮಕಾತಿ ಮಾಡಿಕೊಳ್ಳಬೇಕು.

-ಸ್ವರೂಪ ಟಿ.ಕೆ. ಜಿಲ್ಲಾಧಿಕಾರಿ ಉಡುಪಿ.

‘ನಿವೇಶನಗಳ ಮರು ಹಂಚಿಕೆಗೆ ಕ್ರಮ’

ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಹಂಚಿಕೆಯಾಗಿರುವ ನಿವೇಶನದಲ್ಲಿ ಉದ್ದಿಮೆದಾರರು ನಿಯಮಾನು ಸಾರ ಆರು ತಿಂಗಳ ಒಳಗೆ ಕೈಗಾರಿಕಾ ಚಟುವಟಿಕೆಗಳನ್ನು ಪ್ರಾರಂಭಿಸಬೇಕು. ತಪ್ಪಿದ್ದಲ್ಲಿ ಅಂಥ ನಿವೇಶನಗಳನ್ನು ಮರು ಹಂಚಿಕೆ ಮಾಡಲಾಗುವುದು ಎಂದೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಕೈಗಾರಿಕೋದ್ಯಮಿಗಳು ಕೈಗಾರಿಕಾ ಘಟಕ ಸ್ಥಾಪನೆಗೆ ಪಡೆದಿರುವ ನಿವೇಶನಗಳಲ್ಲಿ ಉದ್ದಿಮೆ ಆರಂಭಿಸದೇ ಹೆಚ್ಚುವರಿ ಕಾಲಾವಕಾಶ ಕೋರಿ ಪದೇ ಪದೇ ಮನವಿ ಸಲ್ಲಿಸುತ್ತಿದ್ದಾರೆ. ಉತ್ಪನ್ನ ಹಾಗೂ ಘಟಕಗಳ ಹೆಸರು ಬದಲಾವಣೆ, ಹೆಚ್ಚುವರಿ ಕಾಲಾವಕಾಶ ಸೇರಿದಂತೆ ವಿವಿಧ ಅಸಮರ್ಪಕ ಕಾರಣ ನೀಡಿ ಕಾರ್ಯಚಟುವಟಿಕೆ ಆರಂಭಿಸದೇ ಇರುವವರ ನಿವೇಶನ ಗಳನ್ನು, ಕೈಗಾರಿಕೆ ಪ್ರಾರಂಭಿಸಲು ನಿವೇಶನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿರುವ ಆಸಕ್ತರಿಗೆ ಮರು ಹಂಚಿಕೆ ಮಾಡಲು ಆದ್ಯತೆಯ ಮೇಲೆ ಕ್ರಮವಹಿಸಬೇಕು ಎಂದು ಸಣ್ಣ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸಣ್ಣ ಕೈಗಾರಿಕಾ ಸಂಘದ ಮನವಿ

ಹೊಸ ಉದ್ದಿಮೆದಾರರು ಕೈಗಾರಿಕೆಗಳನ್ನು ಪ್ರಾರಂಭಿಸಲು ಮುಂದೆ ಬಂದಾಗ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಎಂಎಸ್‌ಎಂಇಗಳಿಗೆ ಬ್ಯಾಂಕ್ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ವತಿ ಯಿಂದ ಸಾಲ- ಸಹಾಯಧನ ಸೌಲಭ್ಯ, ಸಿಬಿಲ್ ಸ್ಕೋರ್ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಉದ್ಯಮಿಗಳಿಗೆ ಅನುಕೂಲವಾಗಲಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘದ ಉದ್ದಿಮೆದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News