ಉಡುಪಿ ಕ್ಷಯ ಮುಕ್ತ ಜಿಲ್ಲೆಯಾಗಲು ಸಾರ್ವಜನಿಕರ ಸಹಕಾರ ಅಗತ್ಯ: ನ್ಯಾ. ಯೋಗೇಶ್ ಪಿ. ಆರ್
ಉಡುಪಿ: ಉಡುಪಿ ಜಿಲ್ಲೆಯನ್ನು ಕ್ಷಯ ಮುಕ್ತ ಜಿಲ್ಲೆಯನ್ನಾ ಗಿಸಲು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಕ್ಷಯ ರೋಗ ದಿನಾಚರಣೆ ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯತ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರಕಾರ 2030ರ ಒಳಗೆ ಭಾರತವನ್ನು ಕ್ಷಯ ಮುಕ್ತ ದೇಶವಾಗಿಸುವ ಆಂದೋಲನವನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನೂ ಸಹ ಕ್ಷಯ ಮುಕ್ತಗೊಳಿಸಬೇಕು. ಕ್ಷಯರೋಗವನ್ನು ಮುಂಚಿತವಾಗಿ ಪತ್ತೆ ಹಚ್ಚುವುದು, ಸಂಪೂರ್ಣ ಚಿಕಿತ್ಸೆ ನೀಡುವುದು ಹಾಗೂ ರೋಗ ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸ ಬೇಕು ಎಂದವರು ಹೇಳಿದರು.
ಕ್ಷಯ ರೋಗ ಎಂಬುದು ಸಾಂಕ್ರಾಮಿಕ ಅಂಟುರೋಗವಾಗಿದ್ದು, ಡಾ. ರಾಬರ್ಟ್ ಕೋಚ್ ಎಂಬವರು ಮಾ.24ರಂದು ಟಿಬಿಗೆ ಸಂಬಂಧಿಸಿದ ಎಂ.ಟಿ.ಬಿ ಬ್ಯಾಕ್ಟೀರಿಯಾವನ್ನು ಅನ್ವೇಷಿಸಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಕ್ಷಯರೋಗದ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷ ಮಾರ್ಚ್ 24ನ್ನು ವಿಶ್ವ ಕ್ಷಯ ರೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ದೇಶದಲ್ಲಿ ಪ್ರತಿವರ್ಷ ಸರಿ ಸುಮಾರು 960 ಮಂದಿ ಕ್ಷಯರೋಗದಿಂದ ಸಾವನ್ನಪ್ಪುತಿದ್ದಾರೆ. ಕ್ಷಯ ರೋಗಕ್ಕೆ ತುತ್ತಾದ ವ್ಯಕ್ತಿ ವರ್ಷಕ್ಕೆ ಕನಿಷ್ಠ 10-15 ಮಂದಿಗೆ ಈ ರೋಗವನ್ನು ಅಂಟಿಸುತ್ತಿದ್ದಾನೆ. ಕ್ಷಯ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯವು ವ್ಯಕ್ತಿಯ ದೇಹವನ್ನು ಪ್ರವೇಶಿಸಿ, ಆತನ ದೇಹದ ಮೇಲೆ ಹಲವಾರು ಬದಲಾವಣೆ ತರುತ್ತದೆ. ನಿರಂತರ ಕೆಮ್ಮು, ಜ್ವರ, ರಾತ್ರಿಯ ವೇಳೆ ಬೆವರು ಬರುವಂತಹ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ಷಯ ಸಾಂಕ್ರಾಮಿಕ ರೋಗ ವಾಗಿದ್ದು, ರೋಗವನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ನೂರು ದಿನಗಳ ಕ್ಷಯರೋಗ ಅಭಿಯಾನದಲ್ಲಿ ಕ್ಷಯರೋಗಿಗಳನ್ನು ಗುರುತಿಸಿ, ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದರೊಂದಿಗೆ ಅವರು ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಮೌಲ್ಯಮಾಪನ ಮಾಡಲಾಗುವುದು ಎಂದರು.
ಜನರ ಆರೋಗ್ಯವನ್ನು ಕಾಪಾಡಲು ಪಂಚಾಯತ್ ಮಟ್ಟದಿಂದಲೇ ಅಧಿಕಾರಿಗಳು ಸಮಾರೋಪಾದಿಯಲ್ಲಿ ಕೆಲಸ ಮಾಡಬೇಕು. ಗ್ರಾಮಸಭೆಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು ಎಂದ ಅವರು, ಸಾಂಕ್ರಾಮಿಕ ರೋಗಗಳನ್ನು ಕೊನೆಗಾಣಿಸುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಆಶಾ ಕಾರ್ಯಕರ್ತೆಯರೂ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, 2015ಕ್ಕೆ ಹೋಲಿಸಿದ್ದಲ್ಲಿ ಜಿಲ್ಲೆಯಲ್ಲಿ 2022ರಲ್ಲಿ ಶೇ.40-60ರಷ್ಟು ಟಿ.ಬಿ ಪ್ರಕರಣಗಳು ಕಡಿಮೆಯಾಗಿದೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಉಡುಪಿ ಜಿಲ್ಲೆ ಬೆಳ್ಳಿಪದಕವನ್ನು ಪಡೆದುಕೊಂಡಿದೆ. ಕಳೆದ ಸಾಲಿನಲ್ಲಿ ಸಹ ಶೇ.9ರಷ್ಟು ಟಿ.ಬಿ ಪ್ರಕರಣಗಳನ್ನು ಕಡಿಮೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲೆಯ ಎಲ್ಲಾ ತಾಲೂರುಗಳ ಗ್ರಾಪಂಗಳ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರುಗಳು, ಪಿಡಿಓಗಳು, ಆಶಾ ಕಾರ್ಯಕರ್ತೆ ಯರು ಹಾಗೂ ಇತರರು ಉಪಸ್ಥಿತರಿದ್ದರು.
ಆಲಂದೂರು ಮಂಜುನಾಥ ಎಸ್ ಗಾಣಿಗ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಸಂದೀಪ್ ವಂದಿಸಿದರು.
ಜಿಲ್ಲೆಯಲ್ಲಿ 26 ಕ್ಷಯಮುಕ್ತ ಗ್ರಾಪಂ:
ಇದೇ ಸಂದರ್ಭದಲ್ಲಿ ಗ್ರಾಮದ ಜನರ ಆರೋಗ್ಯ ತಪಾಸಣೆ, ಗುಣಮುಖ ವಾಗಿರುವ ಅಂಕಿ-ಅಂಶ ಸೇರಿದಂತೆ ವಿವಿಧ ಮಾನದಂಡಗಳನ್ನು ಅನುಸರಿಸಿ ಕಳೆದ ಸಾಲಿನಲ್ಲಿ ಜಿಲ್ಲೆಯ 26 ಗ್ರಾಮ ಪಂಚಾಯತ್‌ಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯತ್‌ಗಳೆಂದು ಆಯ್ಕೆ ಮಾಡಲಾಗಿದೆ.
ಇವುಗಳ ಪೈಕಿ ಪ್ರಸಕ್ತ ಸಾಲಿನಲ್ಲಿ 23 ಗ್ರಾಮ ಪಂಚಾಯತ್‌ಗಳಿಗೆ ರಜತ ಪದಕ ಹಾಗೂ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಕ್ಷಯ ಮುಕ್ತ ಗ್ರಾಮ ಪಂಚಾಯತ್‌ಗಳೆಂದು ಆಯ್ಕೆ ಮಾಡಲಾದ 39 ಗ್ರಾಮ ಪಂಚಾಯತ್‌ಗಳಿಗೆ ಕಂಚಿನ ಪದಕದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರಸಲಾಯಿತು. ಪ್ರಸಕ್ತ ಸಾಲಿನ ಕ್ಷಯ ನಿರ್ಮೂಲನಾ ಕಾರ್ಯಕ್ರಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
‘ಜಿಲ್ಲೆಯಲ್ಲಿ ಕ್ಷಯರೋಗಿಗಳನ್ನು ಪತ್ತೆಹಚ್ಚಲು ನ್ಯಾಟ್ ಮೂಲಕ ಪರೀಕ್ಷೆ ನಡೆಸಿ, ರೋಗಿಗಳನ್ನು ಚಿಕಿತ್ಸೆ ವ್ಯಾಪ್ತಿಗೆ ತಂದು ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಕ್ಷಯ ರೋಗದ ಸೋಂಕಿಗೆ ಒಳಗಾದವರಿಗೆ ಮೂರು ತಿಂಗಳವರೆಗೆ ಚಿಕಿತ್ಸೆ ನೀಡಿ, ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಅದಲ್ಲದೆ ಬಿಸಿಜಿ ಲಸಿಕೆಯನ್ನು ಕ್ಷಯ ರೋಗ ಬರುವ ಸಾಧ್ಯತೆ ಇರುವ 60 ವರ್ಷ ಮೇಲ್ಪಟ್ಟವರಿಗೆ, ಡಯಾಬಿಟಿಸ್ ರೋಗಿಗಳಿಗೆ, ಧೂಮಪಾನ ಹಾಗೂ ಮದ್ಯಪಾನ ಮಾಡುವವರಿಗೆ, ಕ್ಷಯರೋಗದಿಂದ ಗುಣಮುಖರಾದವರಿಗೆ ಹಾಗೂ ಕ್ಷಯ ರೋಗಿಗಳ ಸಂಪರ್ಕದಲ್ಲಿರುವವರಿಗೆ ನೀಡುವ ಮೂಲಕ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ.’
ಡಾ.ಚಿದಾನಂದ ಸಂಜು, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ.