ಪುಲೆ ಮಹಿಳೆಯರಿಗೆ ಶಾಲೆ ತೆರೆದ ದೇಶದ ಪ್ರಥಮ ಮಹಿಳಾ ಶಿಕ್ಷಕಿ: ಮಂಜುನಾಥ್ ಗಿಳಿಯಾರು
ಕುಂದಾಪುರ, ಜ.4: ಅಂದಿನ ಕಾಲದಲ್ಲಿ ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯರಿಗೆ ವಿದ್ಯಾಬ್ಯಾಸಕ್ಕೆ ಅವಕಾಶ ಕಲ್ಪಿಸುವಲ್ಲಿ ಅವಮಾನಗಳನ್ನು ಸಹಿಸಿಕೊಂಡು ಕಷ್ಟ ನಷ್ಟಗಳನ್ನು ಅನುಭವಿಸಿದರೂ ಮಹಿಳೆಯರಿಗೆ ಶಾಲೆ ತೆರೆದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿಪುಲೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರದಾನ ಸಂಚಾಲಕ, ವಕೀಲ ಟಿ.ಮಂಜುನಾಥ ಗಿಳಿಯಾರು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಹಾಗೂ ತಾಲೂಕು ಮಹಿಳಾ ಒಕ್ಕೂಟ ವತಿಯಿಂದ ಕೋಟೇಶ್ವರದ ದೇವರಾಜ ಅರಸು ಹಿಂದುಳಿದ ಮೆಟ್ರಿಕ್ ನಂತರದ ಪದವಿ ಪೂರ್ವ ವಿದ್ಯಾರ್ಥಿನಿಲಯ ದಲ್ಲಿ ಶನಿವಾರ ನಡೆದ ಅಕ್ಷರ ಮಾತೆ ಸಾವಿತ್ರಿ ಬಾಯಿಪುಲೆ 195ನೇ ಜನ್ಮಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಮಹಿಳೆಯರು ಸಶಕ್ತರಾಗಲು ಸಾವಿತ್ರಿಬಾಯಿ ಪುಲೆ ಅವರ ಆದರ್ಶಗಳು ದಾರಿದೀಪವಾಗಿವೆ. ಭಾರತದ ಗೌರವಾನ್ವಿತ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಪುಲೆ ಅವರ ಜೀವನ ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯೆ ಲತಾ ಎಸ್.ಶೆಟ್ಟಿ ಮಾತನಾಡಿ, ಸಾವಿತ್ರಿಬಾಯಿ ಪುಲೆ ಕೇವಲ ಹೆಣ್ಣಾಗಿ ಉಳಿಯದೆ ಭಾರತದ ಮಹಿಳೆಯರಿಗೆ ವಿದ್ಯೆಯ ಪರಿಕಲ್ಪನೆ ನೀಡುವ ಮೂಲಕ ಪ್ರತಿಯೊಬ್ಬ ಮಹಿಳೆಯರು ಸಮಾಜದಲ್ಲಿ ಗೌರವಾನ್ವಿತ ಸ್ವಾಭಿಮಾನಿ ಜೀವನವನ್ನು ಬಾಳುವಂತೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಗೀತಾ ಸುರೇಶ್, ಕುಂದಾಪುರ ಅಪರಾಧ ವಿಭಾಗದ ಉಪನಿರೀಕ್ಷಕಿ ಪುಷ್ಪ, ಕುಂದಾಪುರ ತಾಲೂಕು ಮುಖ್ಯ ವಿದ್ಯಾರ್ಥಿನಿಲಯ ಪಾಲಕಿ ಆಶಾ ದೇವಿ, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಬಾರಕೂರು, ದಸಂಸ ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮ್ ಸುಂದರ್ ತೆಕ್ಕಟ್ಟೆ, ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಕುಂದಾಪುರ ತಾಲೂಕು ಸಂಘಟನಾ ಸಂಚಾಲಕರುಗಳಾದ ಚಂದ್ರ ಊಳ್ಳೂರು, ಅಶೋಕ ಮೊಳಹಳ್ಳಿ, ಮಹೇಶ್ ಗಂಗೊಳ್ಳಿ, ಗೋಪಾಲ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ನಿಲಯ ಪಾಲಕಿ ಆಶಲತಾ ವಂದಿಸಿದರು. ಚೈತ್ರ ಸತೀಶ್ ಕಾರ್ಯಕ್ರಮ ನಿರೂಪಿಸಿದರು.