×
Ad

ನಿಯಮಿತ ಆರೋಗ್ಯ ತಪಾಸಣೆ ಸದೃಢ ಸ್ವಾಸ್ಥ್ಯ ನಿರ್ವಹಣೆಗೆ ಪೂರಕ: ಡಾ.ವಿಜಯ ಬಲ್ಲಾಳ್

Update: 2023-10-31 19:03 IST

ಉಡುಪಿ, ಅ.31: ಶಿಸ್ತುಬದ್ಧ ಆಹಾರ ಕ್ರಮ, ವ್ಯಾಯಾಮ, ಉಲ್ಲಸಿತ ಮನಸ್ಸಿನ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಸದೃಢ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ನಿರ್ವಹಣೆಗೆ ಪೂರಕ ಎಂದು ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಅಂಬಲಪಾಡಿ ಬಿಲ್ಲವ ಸೇವಾ ಸಂಘ, ಶ್ರೀವಿಠೋಬ ಭಜನಾ ಮಂದಿರದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ಅಂಬಲಪಾಡಿ ಶ್ರೀನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ’ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ’ ಮತ್ತು ’ಸ್ವಯಂ ಪ್ರೇರಿತ ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹೆದರಿಕೆ ಮತ್ತು ನಿರ್ಲಕ್ಷ್ಯ ಮನೋಭಾವ ಅರೋಗ್ಯ ಸಂರಕ್ಷಣೆಗೆ ಮಾರಕ. ಹೆಚ್ಚಿನ ದೈಹಿಕ ತ್ರಾಸವಿಲ್ಲದ ಒತ್ತಡದ ಬದುಕಿನ ನಡುವೆ ಎಲ್ಲ ವಯೋಮಾನದ ಜನತೆ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ಅಗತ್ಯತೆ ಎಂದು ಅವರು ತಿಳಿಸಿದರು.

ಅಂಬಲಪಾಡಿ ಪಠೇಲರಮನೆ ಭರತ್ ಶೆಟ್ಟಿ ಹಾಗೂ 60ನೇ ಬಾರಿಗೆ ರಕ್ತದಾನಗೈದ ಸಾಮಾಜಿಕ ಕಾರ್ಯಕರ್ತ ರಾಘ ವೇಂದ್ರ ಪ್ರಭು ಕರ್ವಾಲು ಅವರನ್ನು ಸನ್ಮಾನಿಸಲಾಯಿತು. ಪಾರ್ಶ್ವವಾಯು ಪೀಡಿತರಿಗೆ ಗಾಲಿ ಕುರ್ಚಿ ಯನ್ನು ವಿತರಿಸಿ ದರು. ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ 150ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಉಡುಪಿಯ ದಿಶಾ ಸರ್ಜಿಕಲ್ಸ್ ಎಂಡ್ ಲೈಫ್ ಕೇರ್ ವತಿಯಿಂದ ಫಸ್ಟ್ ಏಡ್ ಕಿಟ್‌ಗಳನ್ನು ವಿತರಿಸಲಾಯಿತು.

ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ.ಬಂಗೇರ, ಆಸ್ಪತ್ರೆಯ ಬ್ಲಡ್ ಸೆಂಟರ್‌ನ ಆರೋಗ್ಯಾಧಿಕಾರಿ ಡಾ.ದೀಪ್ ಎಂ., ತಾಂತ್ರಿಕ ಮೇಲ್ವಿಚಾರಕ ವಿಶ್ವೇಶ್ ಎನ್., ಲಯನ್ಸ್ ಕ್ಲಬ್ ಹಿರಿಯಡ್ಕ ಅಧ್ಯಕ್ಷ ಮೋಹನದಾಸ್ ಆಚಾರ್ಯ, ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿ ಆಕಾಶ್ ಕುಂದರ್, ಲಯನ್ಸ್ ಕ್ಲಬ್ ಉಡುಪಿ-ಚೇತನಾ ಅಧ್ಯಕ್ಷ ಜಗದೀಶ್ ಆಚಾರ್ಯ, ಲಯನ್ಸ್ ಕ್ಲಬ್ ಉಡುಪಿ-ಬನ್ನಂಜೆ ಅಧ್ಯಕ್ಷ ಸದಾನಂದ, ಬುಡೋಕಾನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್, ಉಜ್ವಲ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸವಿತಾ ಸಂತೋಷ್, ಪಂದುಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಚಂದ್ರ ರಾವ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News