ಶೀಂಬ್ರ ದೇವಳದ ಬಳಿ ನದಿ ಕೊರೆತ: ಶಾಸಕರು, ಅಧಿಕಾರಿಗಳ ತಂಡದಿಂದ ಪರಿಶೀಲನೆ
ಮಣಿಪಾಲ, ಜು.30: ಶಿವಳ್ಳಿ ಗ್ರಾಮದ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಬದಿಯಲ್ಲಿ ನದಿ ಕೊರೆತದಿಂದಾಗಿ ದೇವಸ್ಥಾನದ ಬಳಿಯ ಭಾಗ ಕುಸಿಯು ತ್ತಿದ್ದು, ಈ ಹಿನ್ನೆಲೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹಾಗೂ ಅಧಿಕಾರಿಗಳು ರವಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿ ವರ್ಷದಂತೆ ಕೃಷ್ಣಂಗಾರ ಚತುರ್ದಶಿಯಂದು ಕ್ಷೇತ್ರದ ತೀರ್ಥ ಸ್ನಾನಕ್ಕಾಗಿ ಸಾವಿರಾರು ಭಕ್ತರು ಈ ಬಾರಿಯೂ ಆಗಮಿಸಲಿದ್ದು ಭಕ್ತರಿಗೆ ಸ್ನಾನ ಘಟ್ಟಕ್ಕೆ ಇಳಿಯಲು ಸೂಕ್ತ ವ್ಯವಸ್ಥೆ ಇಲ್ಲ ಹಾಗೂ ಕುಸಿಯುತ್ತಿರುವ ದೇವಸ್ಥಾನದ ಜಾಗದ ರಕ್ಷಣೆಗೆ ತುರ್ತಾಗಿ ತಾತ್ಕಾಲಿಕ ಕಾಮಗಾರಿ ಮಾಡುವಂತೆ ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭಾ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಸಣ್ಣ ನೀರಾವರಿ ಇಲಾಖೆ ಮೂಲಕ ತುರ್ತು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಶಾಸಕರು ತಿಳಿಸಿದರು. ಶೀಘ್ರದಲ್ಲೇ ವ್ಯವಸ್ಥಿತ ರೀತಿಯಲ್ಲಿ ಸ್ನಾನಘಟ್ಟ ಹಾಗೂ ನದಿ ದಂಡೆ ಸಂರಕ್ಷಣೆಗೆ ಶಾಶ್ವತ ಕಾಮಗಾರಿಗೆ ರಾಜ್ಯ ಸರಕಾರ ಮೂಲಕ ಅನುದಾನ ತರಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ, ನಗರ ಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು, ಸಣ್ಣ ನೀರಾವರಿಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್ ಭಂಡಾರಿ, ಸಹಾಯಕ ಅಭಿಯಂತರ ಪುನೀತ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಾಯಕ ಪೂಜಾರ್, ಸಹಾಯಕ ಅಭಿಯಂತರ ಗಿರೀಶ್, ನಗರಸಭಾ ಸದಸ್ಯ ಗಿರೀಶ್ ಅಂಚನ್, ಇಂಜಿನಿಯರ್ ಭಗವಾನ್‌ದಾಸ್, ಮಾಜಿ ನಗರಸಭಾ ಸದಸ್ಯ ಪ್ರಶಾಂತ್ ಭಟ್, ಸ್ಥಳೀಯರಾದ ಡೆನಿಸ್, ಅರುಣಾ ಸುಧಾಮ, ದಿನೇಶ್ ಅಮೀನ್, ಹರಿಕೃಷ್ಣ ಶಿವತ್ತಾಯ, ಶಶಾಂಕ್ ಶಿವತ್ತಾಯ, ಶೆರ್ಲಿನ್, ನವೀನ್ ಶಿವಾತ್ತಾಯ ಮೊದಲಾದವರು ಉಪಸ್ಥಿತರಿದ್ದರು.