ಶತಾಯುಷಿ ಕೆ.ಬಾಬು ರೈ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಆಯ್ಕೆ
ಉಡುಪಿ, ಆ.10: ಅಪ್ಪಟ ಕಲೋಪಾಸಕ, ಮೃದಂಗ ವಿದ್ವಾನ್, ಶತಾಯುಷಿ ಕೋಟೆಕ್ಕಾರು ಬಾಬು ರೈ ಅವರನ್ನು ಈ ಬಾರಿಯ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
1943ರಲ್ಲಿ ಯಕ್ಷಗಾನ ಮದ್ದಲೆ ವಾದಕನಾಗಿ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿ ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ ಬಾಬು ರೈ ಇವರಿಗೆ ಸಹೋದರ ಕೋಟೆಕ್ಕಾರ್ ದೇರಣ್ಣ ರೈಗಳೇ ಮೊದಲ ಗುರು. ಜೀವನೋಪಾಯಕ್ಕಾಗಿ ಊರು ತೊರೆದು ಬೆಂಗಳೂರು, ಮೈಸೂರು ಸೇರಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಟಿ. ಎಂ.ವೆಂಕಟೇಶ ದೇವರ್ ಅವರ ಶಿಷ್ಯತ್ವ ಸ್ವೀಕರಿಸಿದರು. ಅವರಿಂದ ಏಳು ವರ್ಷ ಮೃದಂಗ ವಾದನದಲ್ಲಿ ಪರಿಣಿತಿಯನ್ನು ಪಡೆದರು. ಟಿ. ಆರ್. ಮಹಾಲಿಂಗಂ, ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಳಿಕೃಷ್ಣರಂಥ ಮಹಾನ್ ಕಲಾವಿದರಿಗೆ ಸಾಥ್ ನೀಡಿ ಪ್ರಸಿದ್ಧಿ ಪಡೆದರು.
ಯಕ್ಷಗಾನ ರಂಗಕ್ಕೆ ಮರಳಿ ಬಂದ ಬಾಬು ರೈಗಳು ಮಾಂಬಾಡಿ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರಂಥ ಭಾಗವತರಿಗೆ ಮದ್ದಲೆ ಸಾಥಿ ನೀಡಿದರು. ಅಂದಿನ ಪ್ರಸಿದ್ಧ ಕಲಾವಿದರಾದ ಕುರಿಯ, ಸಾಮಗ, ಶೇಣಿ, ಕರ್ಗಲ್ಲು ಮುಂತಾದವರನ್ನು ರಂಗದ ಮೇಲೆ ಕುಣಿಸಿದರು.
ಸದಾ ಚಿಂತನಶೀಲರಾಗಿರುವ ಬಾಬು ರೈಗಳು ‘ಪ್ರತಿಧ್ವನಿ’ ಎಂಬ ಮೃದಂಗ ಪಾಠದ ಕೃತಿಯನ್ನೂ ಬರೆದಿದ್ದಾರೆ. ಸಂಗೀತಕ್ಷೇತ್ರದಲ್ಲಿ 75 ವರ್ಷಗಳ ಸಾಂದ್ರ ಅನುಭವ, ತಾಳಬಂಧಗಳ ಕುರಿತು ಅಧಿಕಾರಯುತವಾಗಿ ಮಾತನಾಡುವ ವಿದ್ವತ್ತು ಇವರಲ್ಲಿದೆ.
ಕಾಸರಗೋಡಿನ ಶ್ರೀಎಡನೀರು ಮಠದ ಸಭಾಂಗಣದಲ್ಲಿ ಆ.15ರ ಮಂಗಳವಾರ ಸಂಜೆ 5:00 ಗಂಟೆಗೆ ವಿದ್ವಾನ್ ಕೆ.ಬಾಬು ರೈ ಕಾಸರಗೋಡು ಜನ್ಮಶತಮಾನೋತ್ಸವ ಸಮಿತಿ ಆಯೋಜಿಸಿರುವ ಜನ್ಮ ಶತಮಾನೋತ್ಸವ ಸಂಭ್ರಮ ಅಭಿನಂದನಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಮಾರಂಭದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಸ್ಥಾಪಿಸಿದ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು 40,000ರೂ. ನಿಧಿಯೊಂದಿಗೆ ನೀಡಿ ಗೌರವಿಸಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.