ನಕ್ಸಲ್‌ಪೀಡಿತ ಕಬ್ಬಿನಾಲೆ ಅರಣ್ಯ ಪ್ರದೇಶಗಳ ಮನೆಗಳಿಗೆ ಸೋಲಾರ್ ಬೆಳಕಿನ ಭಾಗ್ಯ
ಹೆಬ್ರಿ: ನಕ್ಸಲ್ ನಾಯಕ ವಿಕ್ರಂ ಗೌಡ ಕಳೆದ ನವೆಂಬರ್ ತಿಂಗಳಲ್ಲಿ ಎಎನ್‌ಎಫ್ ಪೊಲೀಸರ ಗುಂಡಿಗೆ ಬಲಿಯಾದ ಪಶ್ಚಿಮ ಘಟ್ಟದ ಮಧ್ಯೆ ಇರುವ ಕುಗ್ರಾಮಗಳ ಅದೆಷ್ಟೋ ಮನೆಗಳು ಹಲವು ವರ್ಷಗಳಿಂದ ಕತ್ತಲಿನಲ್ಲಿ ಬದುಕು ಸಾಗಿಸುತ್ತಿತ್ತು. ಇದೀಗ ಇಲ್ಲಿನ ಮನೆಗಳಿಗೆ ಕರ್ನಾಟಕ ಸರಕಾರ ಹಾಗೂ ಸ್ಥಳೀಯ ಕಂಪೆನಿಗಳು, ಸೇರಿದಂತೆ ಸಿಎಸ್‌ಆರ್ ನಿಧಿಯ ಹಣಕಾಸಿನ ನೆರವಿನ ಮೂಲಕ ಸೋಲಾರ್ ಬೆಳಕು ನೀಡಲು ಮುಂದಾಗಿದೆ.
ಹೆಬ್ರಿ ತಾಲೂಕಿನ ಪಶ್ಚಿಮ ಘಟ್ಟಗಳಲ್ಲಿರುವ ನಾಡ್ಪಾಲು ಗ್ರಾಮದ ಕಬ್ಬಿನಾಲೆ ಸಮೀಪದ ಪೀತಬೈಲು, ತಿಂಗಳಮಕ್ಕಿ ಪರಿಸರದಲ್ಲಿ ಹಲವು ಮಲೆಕುಡಿಯ ಕುಟುಂಬಗಳು ವಾಸ ಮಾಡಿಕೊಂಡಿದೆ. ಈ ಪ್ರದೇಶ ಹೆಬ್ರಿ ಪೇಟೆಯಿಂದ ಸುಮಾರು ಒಟ್ಟು 20 ಕಿಮೀ ದೂರದಲ್ಲಿದೆ. ಈ ಊರಿಗೆ ರಸ್ತೆಯಲ್ಲಿ ಸಾಗಬೇಕಾದರೆ ಸುಮಾರು 10 ಕಿಮೀ ನಡೆದುಕೊಂಡೆ ಸಾಗಬೇಕು.
ಇಲ್ಲಿಗೆ ಸೂಕ್ತವಾದ ರಸ್ತೆ ವ್ಯವಸ್ಥೆಯೆ ಇಲ್ಲ. ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳು ಉರುಳುವುದೇ ಹೆಚ್ಚು. ಅದರಲ್ಲೂ ಈ ಪ್ರದೇಶ ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಬರುವ ಕಾರಣ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಸಾಧ್ಯವಾಗಿದೆ.
ಐದು ಮನೆಗಳಿಗೆ ಸೌಲಭ್ಯ: ನಕ್ಸಲ್ ನಾಯಕ ವಿಕ್ರಂ ಗೌಡ ನಾಡ್ಪಾಲು ಗ್ರಾಮದ ಪೀತಬೈಲು ಜಯಂತ ಗೌಡ ಎಂಬವರ ಮನೆಯಲಿ ಎನ್ ಕೌಂಟರ್‌ಗೆ ಬಲಿಯಾಗಿದ್ದರು. ಇದೀಗ ನಕ್ಸಲ್ ವಿಕ್ರಂ ಗೌಡ ಮೃತಪಟ್ಟ ಪೀತಬೈಲುವಿನ ಜಯಂತ ಗೌಡ ಮನೆ ಸೇರಿದಂತೆ 5 ಮನೆಗಳಿಗೆ ಈ ಸೋಲಾರ್ ಸೌಲಭ್ಯ ಒದಗಿಸಲಾಗುತ್ತಿದೆ.
ಉಳಿದಂತೆ ತಿಂಗಳಮಕ್ಕಿ ನಾರಾಯಣ ಗೌಡ, ಆನಂದ ಗೌಡ ತಿಂಗಳಮಕ್ಕಿ, ಲಕ್ಷ್ಮಣ್ ಗೌಡ ತಿಂಗಳ ಮಕ್ಕಿ, ಸುಧಾಕರ ಗೌಡ ಪೀತಬೈಲು ಅವರ ಮನೆಗಳು. ಈ ಮನೆಗಳಿಗೆ ಬೆಳಕು ನೀಡುವ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಕೆಲ್ಟೆಕ್ ಎನರ್ಜೀಸ್ ಲಿಮಿಟೆಡ್ ವರಂಗ, ಸೆಲ್ಕೊ ಸೋಲಾರ್ ಲೈಟ್ ಪ್ರೈ.ಲಿ ಕೈ ಜೋಡಿಸಿದೆ.
ಇವುಗಳ ಸಹಯೋಗದೊಂದಿಗೆ ಒಟ್ಟು ಸುಮಾರು 5.75ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಸೌಲಭ್ಯ ದೊರಕಲಿದೆ. ಪ್ರತಿ ಮನೆಯೊಂದಕ್ಕೆ ಒಂದು ಲಕ್ಷ ಹದಿನೈದು ಸಾವಿರ ಖರ್ಚು ನಿಗದಿಯಾಗಿದ್ದು ಇದರಲ್ಲಿ 545 ವ್ಯಾಟ್ ನ ಸೋಲಾರ್ 2 ಪಾನಲ್ ಗಳು, 100 ಎಎಚ್‌ನ ಎರಡು ಬ್ಯಾಟರಿಗಳು, 1.4 ಕೆ.ವಿ.ಯ ಇನ್‌ವರ್ಟರ್ ಅಳವಡಿಸಲಾಗುತ್ತಿದೆ. ಇದರಲ್ಲಿ ಟಿವಿ, ಮಿಕ್ಸಿ ಲೈಟ್, ಫ್ಯಾನ್‌ಗಳು ಕಾರ್ಯ ನಿರ್ವಹಿಸಬಹುದಾಗಿದೆ.
‘ನಾವು ಈವರೆಗೆ ವಿದ್ಯುತ್ ವ್ಯವಸ್ಥೆ ಇಲ್ಲದೆ ಈ ದಟ್ಟ ಕಾಡಿನಲ್ಲಿ ಜೀವನ ನಡೆಸುತ್ತಿದ್ದೇವು. ಇದೀಗ ನಮ್ಮ ಮನೆಗಳಿಗೆ ಸೋಲಾರ್ ಅಳವಡಿಸುವ ಮೂಲಕ ಬೆಳಕು ಒದಗಿಸಲಾಗಿದೆ. ಇದು ನಮಗೆ ತುಂಬಾ ಖುಷಿ ತಂದಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನಮಗೆ ಆಶಾಕಿರಣ ವಾಗಿದೆ. ಸರಕಾರ ಹಾಗು ಸೋಲಾರ್ ಒದಗಿಸಿದ ಕಂಪೆನಿಗೆ ಕೃತಜ್ಞತೆ ಸಲ್ಲಿಸುತ್ತೇನೆ’
-ನಾರಾಯಣ ಗೌಡ, ತಿಂಗಳಮಕ್ಕಿ
ಸೌರಶಕ್ತಿ ಮಾನವನ ಬದುಕಿನಲ್ಲಿ ಶಿಕ್ಷಣ ಆರೋಗ್ಯ ಸೇವಾ ಚಟುವಟಿಕೆಗಳ ಸೇರಿದಂತೆ ಪ್ರಕೃತಿಗೆ ಪೂರಕವಾಗಿ ಬದುಕಲು ಸಹಕಾರಿಯಾಗಿದೆ. ಗುಡ್ಡ ಗಾಡು ಪ್ರದೇಶಗಳಲ್ಲಿ ನ ಜನರಿಗೆ ಸಕಾಲದಲ್ಲಿ ಸಮರ್ಪಕವಾಗಿ ಬೆಳಕು ಒದಗಿಸುವುದೇ ನಮ್ಮ ಮೊದಲ ಗುರಿ. ಜಿ.ಪಂ ಹಾಗು ಕೆಲ್‌ಟೆಕ್ ಎನರ್ಜೀಸ್ ಈ ಯೋಜನೆಗೆ ಕೈ ಜೋಡಿಸಿದೆ. ಪೀತಬೈಲು ತೀರಾ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಸೋಲಾರ್ ಅಳವಡಿಸಿ ಬೆಳಕು ನೀಡುವ ಯೋಜನೆಯಾಗಿದೆ. ಶೀಘ್ರದಲ್ಲೆ ಉದ್ಘಾಟನೆಗೊಳ್ಳಲಿದೆ.
-ಗುರುಪ್ರಕಾಶ್ ಶೆಟ್ಟಿ, ಡೆಪ್ಯೂಟಿ ಜನರಲ್ ಮ್ಯಾನೇಜರ್, ಸೆಲ್ಕೋ ಸೋಲಾರ್