ಪಂಚ ಗ್ಯಾರಂಟಿಗಳು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ: ಹರಿಪ್ರಸಾದ್ ಶೆಟ್ಟಿ
ಕುಂದಾಪುರ: ಪಂಚಗ್ಯಾರೆಂಟಿಗಳು ಕುಂದಾಪುರ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅರ್ಹ ಫಲಾನುಭವಿಗಳು ಸವಲತ್ತು ಪಡೆಯಲು ಸಂಬಂದಪಟ್ಟ ಇಲಾಖಾಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕೆಂದು ಗ್ಯಾರೆಂಟಿ ಯೋಜನೆಗಳ ಕುಂದಾಪುರ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಕುಂದಾಪುರ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯಿಂದ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಅನುಷ್ಠಾನ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿ ತಾಲೂಕಿನಲ್ಲಿ 75 ಕೊರಗ ಕುಟುಂಬಗಳಿಗೆ ತಲುಪುತ್ತಿಲ್ಲ. ಎಪ್ರಿಲ್ ತಿಂಗಳೊಳಗೆ ಈ ಕುಟುಂಬಗಳ ನೋಂದಣಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶಕ್ತಿ ಹಾಗೂ ಗೃಹಜ್ಯೋತಿ ಯೋಜನೆಗಳಲ್ಲಿನ ಕೆಲವೊಂದು ಅಡೆತಡೆಗಳನ್ನು ಸರಿಪಡಿಸುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಸರಕಾರದ ಪಂಚ ಗ್ಯಾರಂಟಿಯಿಂದ ಕುಂದಾಪುರದ ಒಂದು ತಾಲೂಕಿಗೆ 349 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಯನ್ನು ಸರಕಾರ ಸಂಪೂರ್ಣ ಈಡೇರಿಸುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ 15 ಕಿ.ಲೋ ಅಕ್ಕಿ ವಿತರಣೆ ಮಾಡಲಾಗುತ್ತಿದ್ದು ಇದು ರಾಜ್ಯದ ಇತಿಹಾಸದಲ್ಲಿ ಮೊದಲು. ಪಡಿತರ ವಿತರಣೆ ವಿಳಂಬ ಹಾಗೂ ಆಟೋ ರಿಕ್ಷಾದವರು ಬಾಡಿಗೆ ದುಪ್ಪಟ್ಟು ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವಂತೆ ತಿಳಿಸಲಾಗಿದೆ ಎಂದರು.
349ಕೋಟಿ ರೂ. ಬಿಡುಗಡೆ: ಫೆಬ್ರವರಿ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆ ಯಡಿ 14,45,42,000 ಹಣ ಬಿಡುಗಡೆಯಾಗಿದ್ದು, ಗೃಹಜ್ಯೋತಿಯಡಿ 4,18,46,445ರೂ ಸಬ್ಸಿಡಿ ತಾಲೂಕಿನ ಜನತೆಗೆ ಸಿಕ್ಕಿದೆ. ಅನ್ನಭಾಗ್ಯ ಯೋಜನೆಯಡಿ 3,41,37,810 ರೂ. ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಿದೆ. 6.5 ಲಕ್ಷ ಮಹಿಳೆಯರು, ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಪ್ರಯಾಣಿಸಿ 2,40,58,604 ರೂ ಸೌಲಭ್ಯವನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಯುವನಿಧಿ ಯೋಜನೆಯಡಿ 13,83,000ರೂ. ಅನುದಾನ ಬಿಡುಗಡೆ ಯಾಗಿದೆ. ಒಟ್ಟು ಫೆಬ್ರವರಿ ತಿಂಗಳಲ್ಲಿ ಕುಂದಾಪುರ ತಾಲೂಕಿಗೆ ಪಂಚ ಗ್ಯಾರಂಟಿ ಯೋಜನೆಯಡಿಯಲ್ಲಿ 24,59,67,859 ರೂ ಬಿಡುಗಡೆಯಾಗಿದೆ. ಮಾರ್ಚ್ ತಿಂಗಳಂತ್ಯಕ್ಕೆ 349,44,77,652 ರೂ. ಬಿಡುಗಡೆಯಾಗಿದೆ. ಹಿಂದಿನ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವಂತೆ ಪರೀಕ್ಷೆ ಮುಗಿಯುವ ತನಕ ತುರ್ತು ಸಂದರ್ಭ ಬಿಟ್ಟು ವಿದ್ಯುತ್ ಕಡಿತ ಮಾಡದಂತೆ ಸೂಚಿಸಲಾಗಿದ್ದು, ಮೆಸ್ಕಾಂ ಇಲಾಖೆ ಅನುಷ್ಠಾನ ಮಾಡಿದ್ದಾರೆ ಎಂದರು.
ಸಭೆಯಲ್ಲಿ ಸದಸ್ಯರಾದ ವಾಣಿ ಆರ್. ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಅಹಮದ್ ಗಂಗೊಳ್ಳಿ, ಚಂದ್ರ ಕಾಂಚನ್ ಜನ್ನಾಡಿ, ಅರುಣ್ ಹಕ್ಲಾಡಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.
ಮೃತ ತಾಯಿ ಖಾತೆಗೆ ಹಣ, ಮಗಳಿಗಿಲ್ಲ ಗೃಹಲಕ್ಷ್ಮೀ ಭಾಗ್ಯ!
ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾ.ಪಂ ವ್ಯಾಪ್ತಿಯ ಮಾಸ್ತಿಬೆಟ್ಟು ನಿವಾಸಿ ಚಂದ್ರವತಿ ಎಂಬವರು 2020ರಲ್ಲಿ ಮೃತರಾಗಿದ್ದು ತರುವಾಯ ಅವರ ಪುತ್ರಿ ಜಾನಕಿ ಮನೆಯ ಒಡತಿಯಾಗಿದ್ದಾರೆ. ಇವರ ಹೆಸರಲ್ಲಿ ಪಡಿತರ ಚೀಟಿಯೂ ಇದೆ. ಆದರೆ ಗೃಹಲಕ್ಷ್ಮೀ ಯೋಜನೆ ಹಣ ಮಾತ್ರ 5 ವರ್ಷದ ಹಿಂದೆ ಮೃತಪಟ್ಟ ತಾಯಿ ಖಾತೆಗೆ ಜಮಾ ಆಗುತ್ತಿದ್ದು ಅದನ್ನು ಪಡೆಯಲಾಗುತ್ತಿಲ್ಲ.
ಸದ್ಯ ಮನೆ ಯಜಮಾನಿ ಖಾತೆಗೂ ಹಣ ಬರುತ್ತಿಲ್ಲ. ಕಳೆದ 4 ತಿಂಗಳಿನಿಂದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದು ಮೇಲಾಧಿಕಾರಿಗಳಿಗೆ ಪತ್ರ ಬರೆದರೂ ಕೂಡ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ನೈಜ್ಯ ಫಲಾನುಭವಿಗೆ ಹಣ ದೊರಕದಿರುವುದು ದುರದೃಷ್ಟಕರ ಸಂಗತಿ ಎಂದು ಗ್ಯಾರೆಂಟಿ ಯೋಜನೆಗಳ ಕುಂದಾಪುರ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯ ಅಭಿಜಿತ್ ಪೂಜಾರಿ ಹೇರಿಕುದ್ರು ಪ್ರಸ್ತಾಪಿಸಿದರು.
ಇದಕ್ಕೆ ಸಂಬಂಧಿತ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ ರಾಜ್ಯ ಮಟ್ಟದಲ್ಲಿ ಇದು ಬಗೆಹರಿಯಬೇಕಾಗಿದ್ದು, ಈಗಾಗಾಲೇ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಹಲವು ತಿಂಗಳಿನಿಂದ ಈ ವಿಚಾರ ಪ್ರಸ್ತಾಪವಾಗುತ್ತಿದ್ದು ಮುಂದಿನ ಸಭೆಯೊಳಗೆ ಸಮಸ್ಯೆ ಬಗೆಹರಿಸಿ ಎಂದು ಗಣೇಶ್ ಕೊರಗ ಸಹಿತ ಬಹುತೇಕ ಸದಸ್ಯರು ಆಗ್ರಹಿಸಿದರು.