×
Ad

ಮಕ್ಕಳಿಗೆ ಸೌಹಾರ್ದತೆಯ ಪಾಠ ಕಲಿಸಿ: ಶಿಕ್ಷಕರಿಗೆ ಜೆ.ಪಿ.ಹೆಗ್ಡೆ ಕರೆ

Update: 2023-09-05 19:57 IST

ಬ್ರಹ್ಮಾವರ, ಸೆ.5: ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸಮಾಜವೊಂದು ‘ಸರ್ವಜನಾಂಗದ ಶಾಂತಿಯ ತೋಟ’ವಾಗಿರಲು ಮಕ್ಕಳಿಗೆ ಶಾಲೆಯಲ್ಲಿ ಸೌಹಾರ್ದತೆಯ ಪಾಠವನ್ನು ಕಲಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಶಿಕ್ಷಕರಿಗೆ ಕರೆ ನೀಡಿದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇವರ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಮಂಗಳವಾರ ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತಿದ್ದರು.

ಕಲಿಕೆಗೆ ಅಂತ್ಯ ಎಂಬುದಿಲ್ಲ. ಸಣ್ಣ ಮಟ್ಟದಲ್ಲಿ ಪ್ರಾರಂಭಗೊಂಡು ಅದೊಂದು ನಿರಂತರ ಪ್ರಕ್ರಿಯೆಯಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.

ಸಮಾಜವೊಂದು ಸರ್ವ ಜನಾಂಗದ ಶಾಂತಿಯ ತೋಟವಾಗಲು ಮಕ್ಕಳಿಗೆ ಶಾಲಾ ಮಟ್ಟದಿಂದಲೇ ಸೌಹಾರ್ದತೆಯ ಪಾಠವನ್ನು ಕಲಿಸಬೇಕು. ಶಾಲೆಯ ವಾತಾರಣ ಸೌಹಾರ್ದಯುತವಾಗಿರಬೇಕು. ಈ ನಿಟ್ಟಿನಲ್ಲಿ ಇತ್ತೀಚಿನ ಉತ್ತರ ಪ್ರದೇಶದ ಘಟನೆ ನಮಗೆಲ್ಲಾ ಪಾಠವಾಗಬೇಕು ಎಂದು ಹೆಗ್ಡೆ ನುಡಿದರು.

ಮಕ್ಕಳನ್ನು ತಿದ್ದಿ, ಅವರುಗಳಿಗೆ ಉತ್ತಮ ವಿಚಾರಗಳನ್ನು ಬೋಧಿಸಿ. ಉತ್ತಮ ಶಿಕ್ಷಣದ ಮೂಲಕ ಅವರು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುವವರು ಶಿಕ್ಷಕರು. ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಸೌಹಾರ್ದ ವಾತಾವರಣ ನಿರ್ಮಾಣವಾದಾಗ ಮಾತ್ರ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು ಎಂದರು.

ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸಶಕ್ತರಾದಾಗ ಮಾತ್ರ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಅದು ಆರೋಗ್ಯಕರ ಸ್ಪರ್ಧೆಯಾ ಗಿರುವಂತೆ ಶಿಕ್ಷಕರು ಎಚ್ಚರ ವಹಿಸಬೇಕು. ಸ್ಪರ್ಧೆಯ ಹೊರತಾಗಿಯೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಸಮಾಜ ಸದಾ ಗೌರವ ನೀಡುವ ಎರಡು ಹುದ್ದೆಗಳೆಂದರೆ ಗುರು (ಶಿಕ್ಷಕ) ಹಾಗೂ ವೈದ್ಯ. ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವವರು ಶಿಕ್ಷಕರಾದರೆ, ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವವರು ವೈದ್ಯರು. ಇವರಿಬ್ಬರೂ ತಮ್ಮ ಸ್ಥಾನಮಾನವನ್ನು ಅರಿತು ಕೆಲಸ ಮಾಡಬೇಕು ಎಂದರು.

ಗುರು ಎಂದರೆ ಜ್ಞಾನ ನೀಡುವವರು. ಮಕ್ಕಳನ್ನು ತಿದ್ದಿ, ಅವರನ್ನು ಸರಿ ದಾರಿಗೆ ತಂದು ಸಮಾಜದಲ್ಲಿ ಪರಿಪಕ್ವ ವ್ಯಕ್ತಿಗಳ ನ್ನಾಗಿ ಮಾಡುವವರು ಶಿಕ್ಷಕರು. ಆ ಸ್ಥಾನಕ್ಕೆ ಇರುವ ಗೌರವವನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಆದರೆ ನಾವು ಎಲ್ಲೋ ದಾರಿತಪ್ಪುತ್ತಿರುವ ಬೆಳವಣಿಗೆಗಳನ್ನು ಇತ್ತೀಚೆಗೆ ಕಾಣುತಿದ್ದೇವೆ ಎಂಬುದು ವಿಷಾಧನೀಯ ಎಂದರು.

ಮಕ್ಕಳ ಮೊದಲ ರೋಲ್ ಮಾಡೆಲ್ ಶಿಕ್ಷಕರಾಗಿರಬೇಕು. ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ ಯಿಂದ ನಿರ್ವಹಿಸಬೇಕು. ಶಾಲಾ ಅವಧಿಯನ್ನು ಶಾಲೆಯಲ್ಲೇ ಕಳೆದು ಮಕ್ಕಳಿಗೆ ಪಾಠಪ್ರವಚನ ಮಾಡಬೇಕು. ಜಿಲ್ಲೆಯನ್ನು ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ತರುವಲ್ಲಿ ಎಲ್ಲರೂ ತಂಡವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಮಾಹೆ ವಿವಿಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಶೆಟ್ಟಿ, ಜಿಲ್ಲಾ ಡಯಟ್‌ನ ಪ್ರಾಂಶುಪಾಲ ಗೋವಿಂದ ಮಡಿವಾಳ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಅಶೋಕ್ ಕಾಮತ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅವರು ಉಪಸ್ಥಿತರಿದ್ದರು.

ಜಿಲ್ಲಾ ಶಿಕ್ಷಕ ಪ್ರಶಸ್ತಿ: ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದ ತಲಾ 5 ಮಂದಿ ಶಿಕ್ಷಕರಂತೆ ಒಟ್ಟು 15 ಮಂದಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ಜಿಲ್ಲೆಯ ಪ್ರೌಢ ಶಾಲಾ ವಿಭಾಗ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಿಗೆ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆದವು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ. ಸ್ವಾಗತಿಸಿ, ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಹಾಗೂ ಸುಭಿಕ್ಷಾ ಕಾವಡಿ ಕಾರ್ಯಕ್ರಮ ನಿರೂಪಿಸಿದರೆ, ಬ್ರಹ್ಮಾವರ ತಾಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News