ಟೋಲ್‌ಗೇಟ್: ಆ.24ರಂದು ಬೃಹತ್ ಪ್ರತಿಭಟನಾ ಸಭೆ
ಉಡುಪಿ, ಆ.22: ಪಡುಬಿದ್ರಿ, ಬೆಳ್ಮಣ್, ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್‌ಗೇಟ್- ಸುಂಕ ವಸೂಲಾತಿ ಕೇಂದ್ರದ ವಿರುದ್ಧ ಆ.24ರ ಶನಿವಾರ ಪಡುಬಿದ್ರಿ ಬೆಳ್ಮಣ್ಣು ಕಾರ್ಕಳ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ತಿಳಿಸಿದ್ದಾರೆ.
ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡುಬಿದ್ರಿ ಸಮೀಪದ ಕಂಚಿನ ಡ್ಕದಲ್ಲಿ ಬೆಳಗ್ಗೆ 9 ಗಂಟೆಯಿಂದ ಪ್ರತಿಭಟನೆ ನಡೆಯಲಿದ್ದು, 10ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ 11 ವರ್ಷಗಳ ಹಿಂದೆ ರಾಜ್ಯ ಸರಕಾರದ ನಿಧಿಯಿಂದ ಖಾಸಗಿ ಗುತ್ತಿಗೆದಾರರ ಆರ್.ಎನ್.ಶೆಟ್ಟಿ ಸಂಸ್ಥೆಯಿಂದ 61 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. 2013ರಲ್ಲಿ ಕಾಮಗಾರಿ ಮುಗಿದ ಈ ರಸ್ತೆಗೆ 11 ವರ್ಷಗಳ ಬಳಿಕ ಈಗ ಹಾಸನದ ಖಾಸಗಿ ಕಂಪೆನಿಗೆ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ.
2018ರಲ್ಲೇ ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಪ್ರಸ್ತಾಪ ಬಂದಾಗ ಸಮಿತಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಿ ಅದನ್ನು ರದ್ದುಗೊಳಿಸಲು ಯಶಸ್ವಿಯಾಗಿತ್ತು. ಇದೀಗ ಏಕಾಏಕಿ ಪಡುಬದ್ರಿ ಸಮೀಪದ ಕಂಚಿನಡ್ಕದಲ್ಲಿ ಟೋಲ್ ನಿರ್ಮಾಣಕ್ಕೆ ಖಾಸಗಿ ಸಂಸ್ಥೆ ಮುಂದಾಗಿದೆ ಎಂದವರು ವಿವರಿಸಿದರು.
ನಾವು ಹಿಂದೆ ಹೇಳಿದಂತೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಎಲ್ಲಿಯೂ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವು ದಿಲ್ಲ ಎಂಬುದು ಈಗಲೂ ನಮ್ಮ ಸ್ಪಷ್ಟ ನುಡಿಯಾಗಿದೆ ಎಂದು ಸುಹಾಸ್ ಹೆಗ್ಡೆ ತಿಳಿಸಿದರು. ಪಡುಬಹಿದ್ರೆ-ಕಾರ್ಕಳ ರಾಜ್ಯ ಹೆದ್ದಾರಿ ಸುಮಾರು 40ಕ್ಕೂ ಅಧಿಕ ಹಳ್ಳಿಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದೆ. ಇಲಲಿಂದ ಕೇವಲ ನಾಲ್ಕು ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಟೋಲ್‌ಗೇಟ್ ಈಗಾಗಲೇ ಕಾರ್ಯಾಚರಿಸುತ್ತಿದೆ. ಹೀಗೆ ಎರಡೆರಡು ಕಡೆ ಟೋಲ್ ನೀಡಲು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದ ಅವರು ರಾಜ್ಯ ಹೆದ್ದಾರಿ ಕೇವಲ 28ಕಿ.ಮೀ ಉದ್ದದ ರಸ್ತೆಯಾಗಿದ್ದು, ಇದಕ್ಕೆ ಜನರಿಂದ ಟೋಲ್ ಸಂಗ್ರಹಿಸುವುದು ಖಂಡಿತ ಸರಿಯಲ್ಲ ಎಂದರು.
ಆ.24ರ ಪ್ರತಿಭಟನಾ ಸಭೆಯಲ್ಲಿ ಆಸುಪಾಸಿನ 40ಕ್ಕೂ ಅದಿಕ ಹಳ್ಳಿಗಳ ಸಾವಿರಾರು ಜನರು ಸ್ವಪ್ರೇರಣೆಯಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಭಾಗವಹಿಸಲಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಧಾರ್ಮಿಕ ಮುಖಂಡರು, ಎಲ್ಲಾ ಜಾತಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು, ವರ್ತಕರು, ಬಸ್ಸು, ಲಾರಿ, ರಿಕ್ಷಾ, ಟೆಂಪೂ ಮಾಲಕ-ಚಾಲಕರ ಸಂಘಗಳು, ಕೈಗಾರಿಕೆಗಳು, ಉದ್ಯಮಿಗಳು ಎಲ್ಲರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಣ್ ಎಲ್.ಶೆಟ್ಟಿ, ಶಶಿಧರ್, ದಿನೇಶ್ ಕೋಟ್ಯಾನ್, ಜಯ ಎಸ್.ಶೆಟ್ಟಿ, ಸರ್ವಜ್ಞ ತಂತ್ರಿ ಬೆಳ್ಮಣ್ ಮುಂತಾದವರು ಉಪಸ್ಥಿತರಿದ್ದರು.