ಉಡುಪಿ| 60 ಮೀ. ಉದ್ದದ ರೈಲ್ವೆ ಮೇಲ್ಸೇತುವೆಗೆ ಏಳು ವರ್ಷ!
ಉಡುಪಿ, ಸೆ.21: ಕೊನೆಗೂ ಉಡುಪಿ-ಮಣಿಪಾಲದ ಸಾವಿರಾರು ಮಂದಿಯ ಏಳು ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಸುಧೀರ್ಘ ಕಾಲದಿಂದ ನೆನೆಗುದಿಗೆ ಬಿದ್ದು, ವಿವಿಧ ಸಂಘಟನೆಗಳ ಧರಣಿ, ಪ್ರತಿಭಟನೆ, ನಾಟಕಗಳ ನಡುವೆ ನೂರಾರು ಅಪಘಾತ, ಹತ್ತಾರು ಸಾವು-ನೋವುಗಳ ಹೊರತಾಗಿಯೂ ತೆವಳುತ್ತಾ ಸಾಗಿದ ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಉದ್ಘಾಟನೆ ಇಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣರ ಅಮೃತಹಸ್ತದಲ್ಲಿ ನೆರವೇರಿದೆ.
2018ರಲ್ಲಿ ಪ್ರಾರಂಭಗೊಂಡ ಸುಮಾರು 14 ಕೋಟಿ ರೂ. ಮೊತ್ತದ ಮಲ್ಪೆ- ಮೊಳಕಾಲ್ಮೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಉಡುಪಿ ಮತ್ತು ಮಣಿಪಾಲವನ್ನು ಜೋಡಿಸುವ ಈ ಕಾಮಗಾರಿ ಏಳು ವರ್ಷ ಗಳಿಗೂ ಅಧಿಕ ಸಮಯದಿಂದ ನಿರ್ಮಾಣ ಹಂತದಲ್ಲಿತ್ತು. ಕಳೆದೊಂದು ವರ್ಷದಿಂದ ಈ ಯೋಜನೆ ಪ್ರಹಸನದ ಮಟ್ಟವನ್ನೂ ತಲುಪಿತ್ತು. ಜಿಲ್ಲಾಧಿಕಾರಿಗಳು ಮತ್ತು ಸಂಸತ್ ಸದಸ್ಯರು ಪದೇಪದೇ, ನೆನಪಾದಾಗ- ಕೇಳಿದಾಗಲೆಲ್ಲಾ ನೀಡುತಿದ್ದ ಗಡುವುಗಳು ಜೋಕ್ ಮಟ್ಟವನ್ನು ತಲುಪಿದ್ದವು.
ಸದಾ ಜನನಿಬಿಡ ರಸ್ತೆಯ ಬಳಕೆದಾರರು, ಪ್ರಯಾಣಿಕರು, ವಾಹನ ಚಾಲಕರು ಹಾಗೂ ಆಸುಪಾಸಿನ ನಿವಾಸಿಗರ ತಾಳ್ಮೆಯನ್ನು ಪರೀಕ್ಷಿಸಿದವು. ಆದರೆ ಈ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಮತ್ತು ಆಗಾಗ್ಗೆ ಸಂಭವಿಸುತ್ತಿದ್ದ ಅಪಘಾತಗಳು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲೇ ಬೇಕಾದ ಅನಿವಾರ್ಯತೆಯನ್ನು ತೀವ್ರಗೊಳಿಸಿದವು.
2024ರ ಜೂನ್, ಡಿಸೆಂಬರ್, 2025ರ ಜನವರಿ ಕೊನೆಯ ಬಳಿಕ ಹಲವು ಗಡುವುಗಳು ಬಂದು ಹೋದವು. ಸತತ ಒತ್ತಡ, ಜನರ ಆಕ್ರೋಶದ ಕಾರಣ ನಿಜವಾಗಿಯೂ ಈ ವರ್ಷದ ಎಪ್ರಿಲ್‌ನಲ್ಲಿ ಕಾಮಗಾರಿ ಹೆಚ್ಚು ಗಂಭೀರ ಹಾಗೂ ಪ್ರಾಮಾಣಿಕ ರೀತಿಯಲ್ಲಿ ನಡೆದು 450 ಟನ್ ತೂಕದ 58ಮೀ. ಉದ್ದದ ಹುಬ್ಬಳ್ಳಿಯಿಂದ ಬಂದಿದ್ದ ಉಕ್ಕಿನ ಗರ್ಡರ್‌ಗಳನ್ನು ಜೋಡಿಸಲು ಸಾಧ್ಯವಾಗಿತ್ತು. ಪ್ರತಿಹಂತದಲ್ಲಿ ರೈಲ್ವೆ ಅಧಿಕಾರಿಗಳ ಸುರಕ್ಷತಾ ತಪಾಸಣೆಯ ಬಳಿಕ ಮೇ ಬಳಿಕ ಯೋಜನೆ ಅಂತಿಮ ಹಂತ ತಲುಪಿತ್ತು.
ಕಳೆದೆರಡು ತಿಂಗಳಿನಿಂದ ಸಾರ್ವಜನಿಕರ ನಿರಂತರ ಒತ್ತಡದ ಕಾರಣದಿಂದ ರಸ್ತೆ ಕಾಂಕ್ರೀಟೀಕರಣ ಸೇರಿದಂತೆ ಉಳಿದ ಕಾಮಗಾರಿಗಳು ಸಾಕಷ್ಟು ವೇಗವಾಗಿ ನಡೆದು ಇಂದು ಉದ್ಘಾಟನೆಯವರೆಗೆ ಸಾಗಿ ಬಂದಿದೆ. ಇದರೊಂದಿಗೆ ಸೇತುವೆ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗಗಳು ಮತ್ತು ಅಡ್ಡಗೋಡೆಗಳು ನಿರ್ಮಾಣ ಗೊಂಡಿವೆ. ಕಬ್ಬಿಣ, ತುಕ್ಕು ಹಿಡಿಯುವುದನ್ನು ತಡೆಯಲು, ಸುಧೀರ್ಘ ಬಾಳಿಕೆಗೆ ಬಣ್ಣವನ್ನೂ ಬಳಿಯಲಾಗಿದೆ.
ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡ ಕಾರಣ ಇನ್ನು ಉಡುಪಿ-ಮಣಿಪಾಲ ಹೆದ್ದಾರಿಯ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅವಕಾಶವಾಗುವ ನಿರೀಕ್ಷೆಯಿದೆ. ಮಂಗಳೂರಿನ ಕುಪ್ರಸಿದ್ಧ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ರೀತಿಯಲ್ಲೇ ಜನರ ಟ್ರೋಲ್‌ಗೆ ಸಿಕ್ಕಿದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಪೂರ್ಣಗೊಂಡಿರುವುದರಿಂದ ಜನರೀಗ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗಬಹುದು.
ಇಂದ್ರಾಳಿ ಮೇಲ್ಸೇತುವೆಯ ಕೆಲವು ತಾಂತ್ರಿಕ ವೈಶಿಷ್ಟ:
*ಕಾಮಗಾರಿ ಪ್ರಾರಂಭ 2018, ವೆಚ್ಚ ಸುಮಾರು 14 ಕೋಟಿ ರೂ.
*ಸೇತುವೆ ಉದ್ದ 58 ಮೀ. ಸಿಂಗಲ್ ಸ್ಪಾನ್ ಬೋ-ಸ್ಟ್ರಿಂಗ್ ಗರ್ಡರ್ ವಿನ್ಯಾಸ.
*ಅಗಲ 12.5ಮೀ, ಎರಡೂ ಬದಿಯಲ್ಲಿ 1.5ಮೀ. ಅಗಲದ ಪಾದಚಾರಿ ಮಾರ್ಗ.
*ನಿರ್ಮಾಣಕ್ಕೆ ಬಳಸಿದ್ದು 450 ಟನ್ ತೂಕದ ಮೊದಲೇ ಸಿದ್ಧಪಡಿಸಿದ ಗರ್ಡರ್‌ಗಳು.