ಆರೋಪಿ ರಾಜೇಶ್ ಕೇಶವ ಆಚಾರ್ಯ 

ಉಡುಪಿ: ಉಡುಪಿಯ ಕುಕ್ಕಿಕಟ್ಟೆ ಎಂಬಲ್ಲಿ 2002ರಲ್ಲಿ ನಡೆದ ಮುಖ್ಯ ಶಿಕ್ಷಕ ಮನೋಹರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಉಡುಪಿಯ ರಾಜೇಶ್ ಕೇಶವ ಆಚಾರ್ಯ (51)ನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಈತ ರೌಡಿ ವಿನೋದ್ ಶೆಟ್ಟಿಗಾರ್ ಮತ್ತು ಇತರರೊಡನೆ ಸೇರಿ ಮನೋಹರ್ ಶೆಟ್ಟಿ ಅವರನ್ನು ಕೊಲೆ ಮಾಡಿದ್ದನು. ನಂತರ ಆತ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ, ಮುಂದಿನ ನ್ಯಾಯಾಲಯದ ವಿಚಾರಣೆಗೆ 2004ರಿಂದ ಹಾಜರಾಗದೇ ದುಬೈನಲ್ಲಿ 22 ವರ್ಷಗಳಿಂದ ತಲೆ ಮರೆಸಿಕೊಂಡಿದ್ದನು.

ರಾಜೇಶ್ ಕೇಶವ ಆಚಾರ್ಯನನ್ನು ದುಬೈನಲ್ಲಿ ಇಂಟರ್‌ಪೋಲ್ ಸಹಕಾರದಿಂದ ಉಡುಪಿ ಜಿಲ್ಲಾ ಪೊಲೀಸ್, ಮಂಗಳೂರು ಪೊಲೀಸ್ ಮತ್ತು ಸಿಐಡಿ ಗುಪ್ತಚರ ಪೋಲೀಸರು ಬಂಧಿಸಿ ಭಾರತಕ್ಕೆ ಕರೆತಂದಿದ್ದಾರೆ.

ಆರೋಪಿಯನ್ನು ಉಡುಪಿಗೆ ರವಿವಾರ ಕರೆ ತಂದು ಉಡುಪಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಝೀರ್ ಪೊಲ್ಯ/ವಾರ್ತಾಭಾರತಿ

ಉಡುಪಿ ಜಿಲ್ಲಾ ವರದಿಗಾರರು

ನಝೀರ್ ಪೊಲ್ಯ ಅವರು ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಸಂಜೆ ಪತ್ರಿಕೆಯಲ್ಲಿ ಮಾಧ್ಯಮ ವೃತ್ತಿ ಆರಂಭಿಸಿದ ಇವರು, ಒಂದೂವರೆ ವರ್ಷಗಳ ಕಾಲ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 20 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಚಿಟ್ಟೆಗಳ ಬಗ್ಗೆ ಅಧ್ಯಯನ ಹಾಗೂ ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ. ಅದರೊಂದಿಗೆ ಫೋಟೋಗ್ರಫಿ ಕೂಡ ಇವರ ಆಸಕ್ತಿಯ ಕ್ಷೇತ್ರ. ಈವರೆಗೆ 250 ಪ್ರಬೇಧದ ಚಿಟ್ಟೆಗಳ ಛಾಯಾಚಿತ್ರವನ್ನು ಇವರು ಸಂಗ್ರಹಿಸಿದ್ದಾರೆ. ಇವರು ಕರ್ನಾಟಕ ಬ್ಯಾರಿ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು