×
Ad

ಕೊಡವೂರು ಮಹಾರುದ್ರಯಾಗ: ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ; ಮಹರ್ಷಿ ಆನಂದ ಗುರೂಜಿ ಚಾಲನೆ

Update: 2026-05-14 21:14 IST

ಉಡುಪಿ, ಮೇ 14: ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಮೇ 14ರಿಂದ 19ರವರೆಗೆ ನಡೆಯಲಿರುವ ಮಹಾರುದ್ರಯಾಗದ ಪೂರ್ವಭಾವಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಗುರುವಾರ ಸಂಜೆ ಅದ್ಧೂರಿಯಾಗಿ ನಡೆಯಿತು.

ಮಲ್ಪೆ ಅಯ್ಯಪ್ಪ ಮಂದಿರದಿಂದ ಪ್ರಾರಂಭಗೊಂಡ ಈ ಮೆರವಣಿಗೆ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನ ದವರೆಗೆ ನಡೆಯಿತು. ಬೆಂಗಳೂರಿನ ಬ್ರಹ್ಮರ್ಷಿ ಆನಂದ ಸಿದ್ಧಪೀಠದ ಸಂಸ್ಥಾಪಕರಾದ ಮಹರ್ಷಿ ಆನಂದ ಗುರೂಜಿ ಪೂಜೆ ಸಲ್ಲಿಸಿ, ಬಳಿಕ ಕೇಸರಿ ಬಾವುಟ ಹಾರಿಸುವ ಮೂಲಕ ಹಸಿರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಯಲ್ಲಿ ಕೊಂಬು, ವಾದ್ಯ, ನಾಸಿಕ್ ಬ್ಯಾಂಡ್, ಡೋಲು, ಯಕ್ಷಗಾನ ವೇಷಧಾರಿಗಳು, ತಟ್ಟಿರಾಯ, ಕಲ್ಲಡ್ಕ ಗೊಂಬೆಗಳು, ಕೀಲು ಕುದುರೆ, ಮಹಿಳೆಯರ ಮರಕಾಲಿನ ನಡಿಗೆ, ನವದುರ್ಗೆಯರು, ಹುಲಿವೇಷಧಾರಿ, ಕುಣಿತ ಭಜನೆ ಹಾಗೂ ವಿವಿಧ ಆಕರ್ಷಕ ಟ್ಯಾಬ್ಲೊಗಳು, ಜಾನಪದ ಕಲಾವಿದರು ಗಮನಸೆಳೆದರು. ಕಲಶ ಕೈಯಲ್ಲಿ ಹಿಡಿದುಕೊಂಡು ರಸ್ತೆಯುದ್ದಕ್ಕೂ ಸಾಗಿಬಂದ ಮಹಿಳೆಯರು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು.

ಮಹಾರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್, ಸಂಚಾಲಕ ಕೃಷ್ಣಮೂರ್ತಿ ಆಚಾರ್ಯ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಉದ್ಯಮಿ ಹರಿಯಪ್ಪ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕ ತಾರನಾಥ ಪೂಜಾರಿ, ಸಂಚಾಲಕ ನಂದಕಿಶೋರ್ ಕೆಮ್ಮಣ್ಣು, ರಮೇಶ್ ತಿಂಗಳಾಯ, ವಿಜಯ ಕೊಡವೂರು, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾ ಮೊದಲಾದಗಣ್ಯರು ಉಪಸ್ಥಿತರಿದ್ದರು.

ನೂರಕ್ಕೂ ಅಧಿಕ ವಾಹನಗಳಲ್ಲಿ ತೆಂಗಿನಕಾಯಿ, ಹಲಸಿನಕಾಯಿ, ಬೆಲ್ಲ, ದವಸ ಧಾನ್ಯಗಳು, ಅಕ್ಕಿ, ಕಲ್ಲಂಗಡಿ ಹಾಗೂ ವಿವಿಧ ಸಾಮಗ್ರಿಗಳು ದೇವಸ್ಥಾನವನ್ನು ತಲುಪಿದವು.





 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News