ಉಡುಪಿ: ರಾಮನಗರ ಜಿಲ್ಲೆಯ ಮಾವು ಮೇಳಕ್ಕೆ ಚಾಲನೆ
ಉಡುಪಿ, ಮೇ 14: ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ಯಲ್ಲಿರುವ ತೋಟಗಾರಿಕೆ ಇಲಾಖೆಯ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು.
ಮಾವು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಮನಗರ ಜಿಲ್ಲೆಯ ವೈವಿಧ್ಯಮಯ 12ರಿಂದ 15 ವಿವಿಧ ತಳಿಗಳ ಮಾವುಗಳ ಪ್ರದರ್ಶನ ಹಾಗೂ ಮಾರಾಟ ಇಲ್ಲಿ ನಡೆಯಲಿದ್ದು, ಮಾವು ಪ್ರಿಯರಿಗೆ ವಿವಿಧ ಮಾವಿನ ಹಣ್ಣುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯ ರೈತರು ಮಾವಿನ ಹಣ್ಣುಗಳ ಮಾರಾಟ ಮಾಡುತ್ತಿದ್ದು, ಗ್ರಾಹಕರು ಹಣ್ಣುಗಳನ್ನು ಖರೀದಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು.
ರಾಮನಗರ ಜಿಲ್ಲೆಯ ಸುಮಾರು 10 ಮಂದಿ ಮಾವು ಕೃಷಿಕರು ತಾವು ಬೆಳೆದ ಬಾಯಲ್ಲಿ ನೀರೂರಿಸುವ ಮಲ್ಲಿಕಾ, ಕೇಸರ್, ಇಮಾಮ್ ಪಸಂದ್, ರಸಪುರಿ, ಸಿಂಧೂರ, ಸುಂದರಿ, ಆಲ್ಫೋನ್ಸ್, ತೋತಾಪುರಿ, ಮಾಯಾ, ಸಕ್ಕರೆಗುತ್ತಿ, ಮಲಗೋವಾ, ದಸೇರಿ, ಬೈಗಂಪಳ್ಳಿ ಮೊದಲಾದ ತಳಿಗಳ ಮಾವುಗಳನ್ನು ಪ್ರದರ್ಶದಲ್ಲಿ ಇರಿಸಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಮಾವು ಫಸಲು ಕೈಗೆ ಸಿಕ್ಕಿಲ್ಲ. ಆಗಾಗ ಮಳೆ ಸುರಿದರೆ ಉತ್ತಮ ಫಲಸು ಸಿಗುತ್ತದೆ. ಬಿಸಿಲಿಗೆ ಮಾವು ಉತ್ತಮವಾಗಿ ಬೆಳೆಯುವುದಿಲ್ಲ ಎಂದು ಕುರುಬರ ಹಳ್ಳಿ ಗ್ರಾಮದ ಕೃತಿಕುಮಾರ್ ಹಾಗೂ ಕಾಡನಕುಪ್ಪೆ ಗ್ರಾಮದ ಸ್ವಾಮಿ ಸಿ. ಎಂಬ ರೈತರು ತಿಳಿಸಿದರು.
ಸಂಘದ ಸುಮಾರು 10 ಮಂದಿ ರೈತರು 15ರಿಂದ 20 ಟನ್ ವಿವಿಧ ತಳಿಗಳ ಮಾವಿನ ಹಣ್ಣನ್ನು ಇಲ್ಲಿಗೆ ತಂದಿರುವುದಾಗಿ ಅವರು ತಿಳಿಸಿದರು. ಮೊದಲ ದಿನ ಗ್ರಾಹಕರು ಮುಗಿಬಿದ್ದು ಹಣ್ಣುಗಳನ್ನು ಖರೀದಿಸಿ ರೈತರ ಮೊಗದಲ್ಲಿ ನಗು ಮೂಡಲು ಕಾರಣರಾಗಿದ್ದಾರೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಸಹಾಯಕ ನಿರ್ದೇಶಕರಾದ ನಿದೀಶ್, ಹೇಮಂತ್ ಉಪಸ್ಥಿತರಿದ್ದರು.