ಇಂದಿರಾಗಾಂಧಿ ವಿರುದ್ಧ ಸುಳ್ಳು ಸುದ್ದಿ ಪೋಸ್ಟ್: ಶಾಸಕ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಲು ಮಹಿಳಾ ಕಾಂಗ್ರೆಸ್ ಆಗ್ರಹ
ಉಡುಪಿ: ಮಾಜಿ ಪ್ರಧಾನಮಂತ್ರಿ ದಿ. ಇಂದಿರಾ ಗಾಂಧಿ ಅವರ ಕುರಿತಂತೆ ಸುಳ್ಳು ಸುದ್ದಿಯನ್ನು ತಮ್ಮ ಅಧಿಕೃತ ಫೇಸ್ಟುಕ್ ಖಾತೆಯಲ್ಲಿ ಹಂಚಿಕೊಂಡಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ ಸುನಿಲ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.
ಉಡುಪಿ ಜಿಲ್ಲಾ ಕಾಂಗ್ರೆಸ್‌ನ ನಿಯೋಗವೊಂದು ಜಿಲ್ಲಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರನ್ನು ಭೇಟಿಯಾಗಿ ಈ ಸುಳ್ಳು ಸುದ್ದಿ ಹಾಗೂ ಪೋಸ್ಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.
ಸಚಿವರಾಗಿ ಕಾರ್ಯನಿರ್ವಹಿಸಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಇಂತಹ ಸುಳ್ಳು ಸುದ್ದಿಯನ್ನು ಪರೀಶೀಲಿಸದೇ ತಮ್ಮ ಅಧಿಕೃತ ಫೇಸ್ಟುಕ್ ಖಾತೆಯಲ್ಲಿ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ. ದೇಶಕ್ಕೆ ದಿ. ಇಂದಿರಾ ಗಾಂಧಿಯವರ ಕೊಡುಗೆ ಅಪಾರ. ಅಂತಹ ಮೇರು ನಾಯಕಿ ಯನ್ನು ಅಪಮಾನ ಮಾಡಿರುವುದು ಶಾಸಕ ಸುನಿಲ್ ಕುಮಾರ್ ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಶಾಸಕ ಸುನಿಲ್ ಕುಮಾರ್ ಬಿಜೆಪಿ ಐಟಿ ಸೆಲ್‌ನ ಸುಳ್ಳು ಮಾಹಿತಿಯನ್ನು ಪರಿಶೀಲಿಸಿ ಹಂಚುವುದು ಉತ್ತಮ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗೈ, ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಬಾನು ಭಾಸ್ಕರ್, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷೆಯರಾದ ಪ್ರತಿಮಾ ರಾಣೆ ಹಾಗೂ ರೆಹಮತ್, ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಚರಿತ್ರಾ ಎಂ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪ ಅಂಚನ್ ಮತ್ತು ಸಂಧ್ಯಾ ತಿಲಕರಾಜ್ ಉಪಸ್ಥಿತರಿದ್ದರು.