ಚೌತಿ ಸಂಭ್ರಮಕ್ಕೆ ಸಿದ್ಧಗೊಂಡ ಉಡುಪಿ ಜಿಲ್ಲೆ
ಉಡುಪಿ, ಆ.26: ನಾಗರ ಪಂಚಮಿಯ ಬಳಿಕ ಇದೀಗ ಚೌತಿ ಸಂಭ್ರಮಕ್ಕೆ ಉಡುಪಿ ಜಿಲ್ಲೆ ಸಜ್ಜುಗೊಂಡಿದೆ. ಇಂದು ಜಿಲ್ಲೆಯ ಕೆಲವು ಮನೆಗಳಲ್ಲಿ ಗೌರಿ ಹಬ್ಬದ ಆಚರಣೆ ನಡೆದರೆ, ನಾಳೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಗಣೇಶ ಹಬ್ಬದ ಆಚರಣೆ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿ ಊರುಗಳಲ್ಲೂ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಅಂತಿಮ ಹಂತದ ಸಿದ್ಧತೆಗಳು ನನಡೆಯುತ್ತಿವೆ. ಬೃಹತ್ ಗಾತ್ರದ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಉತ್ಸವದ ಸ್ಥಳಕ್ಕೆ ತಂದು ಪ್ರತಿಷ್ಠಾಪನೆ ನಡೆಯಲಿದೆ.
ಇದು ಸಾರ್ವಜನಿಕ ಗಣೇಶೋತ್ಸವದ ಸಂಭ್ರಮವಾದರೆ, ಮನೆಮನೆ ಗಳಲ್ಲೂ ಚೌತಿಯ ಸಂಭ್ರಮಕ್ಕೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಿದ್ಧರಾಗುತಿದ್ದಾರೆ. ಹಲವರು ವಿವಿಧ ಗಾತ್ರದ, ವೈವಿದ್ಯತೆಯ ಗಣಪತಿ ಮೂರ್ತಿಯನ್ನು ತಂದು ಪೂಜಿಸಿದರೆ, ಇತರರು ಕಬ್ಬು, ದವಸಧಾನ್ಯ ಗಳನ್ನಿರಿಸಿ ಚೌತಿಯನ್ನು ಆಚರಿಸಲಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಚೌತಿ ಹಾಗೂ ನವರಾತ್ರಿಯ ವೇಳೆ ಬರುವ ಹೊಸತು ಹಬ್ಬಗಳಿಗೆ ಹೆಚ್ಚಾಗಿ ಊರಿನಲ್ಲಿ ಬೆಳೆದ ತರಕಾರಿಗಳನ್ನೇ ಬಳಸುತ್ತಾರೆ. ಈ ಬಾರಿ ತರಕಾರಿ, ಹೂಹಣ್ಣುಗಳ ಬೆಲೆ ಈಗಾಗಲೇ ದುಬಾರಿಯಾಗಿದ್ದು ಜನಸಾಮಾನ್ಯರ ಕಿಸೆಗೆ ಎಟಕುವಂತಿಲ್ಲ ಎಂಬುದು ಹೆಚ್ಚಿನ ಜನರ ಅಭಿಪ್ರಾಯ.
ಮಳೆಗಾಲದ ಪ್ರಾರಂಭದಲ್ಲಿ ಊರಿನಲ್ಲೇ ಬೆಳೆಯುವ ಬೆಂಡೆಕಾಯಿ, ಹಿರೇಕಾಯಿ, ಮುಳ್ಳುಸೌತೆ, ಪಡುವಲಕಾಯಿ, ಕೆಸು, ಹರಿವೆ ಸೊಪ್ಪುಗಳನ್ನು ಚೌತಿಯ ಸಂದರ್ಭದಲ್ಲಿ ಅಡುಗೆಗೆ ಬಳಸಾಗುತ್ತದೆ. ಆದರೆ ಈ ಬಾರಿ ವಿಪರೀತ ಮಳೆಯಿಂದ ಊರಿನ ತರಕಾರಿ ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಳೆದಿಲ್ಲ. ಇದ್ದರೂ ಬೆಲೆ ದುಬಾರಿ ಎಂದು ಜನಸಾಮಾನ್ಯರು ಗೊಣಗುತಿದ್ದು, ಘಟ್ಟದಿಂದ ಬಂದ ತರಕಾರಿಯನ್ನೇ ಬಳಸುವಂತಾಗಿದೆ ಎಂದವರು ಹೇಳುತ್ತಾರೆ. ಇದು ಹೂವಿನ ವಿಷಯದಲ್ಲೂ ಇದು ಪುನರಾವರ್ತನೆ ಯಾಗಿದೆ.
ಉಡುಪಿಯ ರಥಬೀದಿಯಲ್ಲಿ ಹಾಗೂ ಕೃಷ್ಣ ಮಠದ ಆಸುಪಾಸಿನ ರಸ್ತೆಗಳಲ್ಲಿ ಹೊರಜಿಲ್ಲೆಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಎಲ್ಲೆಲ್ಲೂ ಕಂಡುಬರುತಿದ್ದಾರೆ. ರಸ್ತೆಯುದ್ದಕ್ಕೂ ಬಣ್ಣಬಣ್ಣದ ಹೂವಿನ ಸಾಲು ಕಂಡುಬರುತ್ತಿದೆ.
ಇದರೊಂದಿಗೆ ಚೌತಿ ಹಬ್ಬಕ್ಕೆ ಅಗತ್ಯವಾಗಿ ಬೇಕಾಗುವ ಕಬ್ಬು, ಗಣಪತಿಗೆ ಇಷ್ಟದ ಕೊಟ್ಟೆ ಕಡುಬು (ಮೂಡೆ) ತಯಾರಿಗೆ ಅಗತ್ಯವಾಗಿ ಬೇಕಾಗುವ ಮೂಡೆಓಲೆಯ ಕೊಟ್ಟೆ ಹಾಗೂ ಹಲಸಿನ ಎಲೆಯನ್ನು ಸೆಟೆದು ಮಾಡುವ ಕೊಟ್ಟೆಗಳು ರಾಶಿರಾಶಿ ಕಂಡುಬರುತಿದ್ದು, ಜನರು ಮುಗಿಬಿದ್ದು ಖರೀದಿಸುತಿದ್ದಾರೆ.