Udupi | ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಕೊಲೆ: ಆರೋಪಿಯ ಬಂಧನ
ಕೊಲೆ ಆರೋಪಿ ಗೋವಿಂದ
ಉಡುಪಿ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟ್ ನ ಕ್ಯಾಬಿನ್ ನಲ್ಲಿ ಮೀನುಗಾರ ಕಾರ್ಮಿಕರಿಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಓರ್ವ ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಮೂಲದ ಅಭಿಷೇಕ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಗೋವಿಂದ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ ಬೋಟಿನಲ್ಲಿ ಗೋವಿಂದ ಹಾಗೂ ಅಭಿಷೇಕ್ ಗಲಾಟೆ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಮಂಗಳವಾರ ಬೆಳಗಿನ ಜಾವ ಅಭಿಷೇಕ್ ರನ್ನು ಆರೋಪಿ ಗೋವಿಂದ ಕೊಲೆ ಮಾಡಿ ಓಡಿ ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ತಕ್ಷಣ ಮಲ್ಪೆ ಪೊಲೀಸ್ ಠಾಣಾ ಅನೀಲ್ ಕುಮಾರ್ ಡಿ., ಸಿಬ್ಬಂದಿ ಆದರ್ಶ ಮತ್ತು ಕುಬೇರ ಕಾರ್ಯಪ್ರವೃತ್ತರಾಗಿದ್ದು, ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿ ಗೋವಿಂದ ಹೈದರಾಬಾದ್ ಅಥವಾ ಮುಂಬೈ ಕಡೆ ಹೋಗಲು ಉಡುಪಿ ರೈಲೆ ನಿಲ್ದಾಣದ ಮೂಲಕ ಪರಾರಿಯಾಗಲು ಯತ್ನಿಸಿದ್ದನು. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಿಂದ ಸುಮಾರು 15 ವರ್ಷಗಳಿಂದ ಮನೆಗೆ ಹೋಗದೇ ಮುಂಬೈ ಹೈದರಾಬಾದ್ ಹಾಗೂ ಇತರ ಕಡೆಗಳಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.