ಉಡುಪಿ | ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಮಳೆ ; ತುಂಬಿ ಹರಿಯುತ್ತಿರುವ ನದಿಗಳು
ಉಡುಪಿ/ಕುಂದಾಪುರ : ಮುಂಗಾರು ಪೂರ್ವ ಮಳೆಯ ಆರ್ಭಟ ಜಿಲ್ಲೆಯಲ್ಲಿ ಜೋರಾಗಿ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಪಶ್ಚಿಮಘಟ್ಟ ತಪ್ಪಲು ಪ್ರದೇಶದಲ್ಲೂ ಭಾರೀ ಮಳೆಯಾಗುತಿದ್ದು, ಗಾಳಿಯೂ ಬೀಸುತ್ತಿರುವುದರಿಂದ ಜಿಲ್ಲೆಯ ನದಿಗಳೆಲ್ಲವೂ ತುಂಬಿ ಹರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ನದಿ ತೀರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೆರೆ ಬರುವ ಭೀತಿ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಕೃತಕ ನೆರೆ ಕಾಣಿಸಿಕೊಳ್ಳತೊಡಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳ ಮೇಲೆಯೇ ತೊರೆಯಂತೆ ನೀರು ಹರಿಯುತಿದ್ದು, ಅನೇಕ ಕಡೆಗಳಲ್ಲಿ ಕೆರೆಯಂತೆ ಕಂಡುಬರುತ್ತಿದೆ. ಇದರಿಂದ ಪ್ರಯಾಣಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಕುಂದಾಪುರ ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಬಿಡದೇ ಸುರಿಯುತ್ತಿರುವ ಮಳೆ ಗುರುವಾರ ಸಂಜೆಯೂ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ನದಿ-ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವರ್ಷಧಾರೆಯಿಂದ ಜನಜೀವನ ಅಸ್ತವಸ್ಥವಾಗಿದೆ.
ಹೆದ್ದಾರಿಯಲ್ಲಿ ಕೃತಕ ಕೆರೆ :
ರಾತ್ರಿಯಿಡೀ ಹಾಗೂ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳು ಅಕ್ಷರಶಃ ಕೃತಕ ಕೆರೆಯಾಗಿ ಮಾರ್ಪಟ್ಟು ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಕೋಟೇಶ್ವರ, ಅಂಕದಕಟ್ಟೆ, ಕುಂದಾಪುರದ ಟಿ.ಟಿ. ರಸ್ತೆ ಮೊದಲಾದೆಡೆ ಸರ್ವೀಸ್ ರಸ್ತೆಗಳಲ್ಲಿ ಮೊಣಕಾಲೆತ್ತರ ನೀರು ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬಂದಿತ್ತು.
ಜಿಲ್ಲೆಯ ಪ್ರಮುಖ ನದಿಗಳಾದ ಸ್ವರ್ಣ ನದಿ, ಸೀತಾನದಿ, ವಾರಾಹಿ, ಚಕ್ರ, ಪಂಚಗಂಗಾವಳಿ ಸೇರಿದಂತೆ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಸದ್ಯಕ್ಕೆ ಜಿಲ್ಲೆಯ ಎಲ್ಲೂ ನೆರೆಯ ವಾತಾವರಣ ಕಂಡುಬರದೇ ಇದ್ದರೂ, ಇದೇ ರೀತಿ ಮಳೆ-ಗಾಳಿ ಮುಂದುವರಿದರೆ ಜಿಲ್ಲೆಯ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನೆರೆ ಉಂಟಾಗುವ ಸಾಧ್ಯತೆ ಇದೆ.
30ಕ್ಕೂ ಅಧಿಕ ಮನೆಗಳಿಗೆ ಹಾನಿ :
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳಿಗೆ ಮಳೆ-ಗಾಳಿಯಿಂದ ಹಾನಿಯುಂಟಾಗಿದೆ. ಇದರಿಂದ ಆರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಮೆಸ್ಕಾಂ ಇಲಾಖೆಗೂ ಕಳೆದೆರಡು ದಿನಗಳಿಂದ 20ಲಕ್ಷ ರೂ. ಮೌಲ್ಯದ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ನಿನ್ನೆ ಮತ್ತು ಇಂದು ತಲಾ 50 ವಿದ್ಯುತ್ ಕಂಬಗಳು ಗಾಳಿಯಿಂದ ಧರಾಶಾಹಿಯಾಗಿವೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.
ಕುಂದಾಪುರ ತಾಲೂಕಿನಲ್ಲಿ 10, ಕಾಪು, ಬೆಂದೂರು ತಾಲೂಕುಗಳಲ್ಲಿ ತಲಾ ಎರಡು, ಉಡುಪಿ ತಾಲೂಕಿನಲ್ಲಿ 4, ಬ್ರಹ್ಮಾವರ ತಾಲೂಕಿನಲ್ಲಿ 10, ಕಾರ್ಕಳ ತಾಲೂಕಿನಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವಿಕೋಪ ನಿಯಂತ್ರಣ ಕಚೇರಿಗೆ ಬಂದ ಮಾಹಿತಿ ತಿಳಿಸಿದೆ.
ಕುಂದಾಪುರ ತಾಲೂಕು ಕಂದಾವರ ಗ್ರಾಮದ ಅಣ್ಣಪ್ಪ ಹಾಗೂ ವಿಠಲಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ತಲಾ 40,000 ರೂ.ನಷ್ಟ ಸಂಭವಿಸಿದೆ. ಬೀಜಾಡಿಯಲ್ಲಿ ನಾಗು ಅವರ ಮನೆ ಮೇಲೆ ಮರ ಬಿದ್ದು 60 ಸಾವಿರ ರೂ.ನಷ್ಟವಾಗಿದೆ. ಕುಂದಾಪುರ ಕಸಬಾದ ರಾಘವೇಂದ್ರ, ಸುರೇಶ್ ಅವರ ಮನೆಗಳಿಗೆ ತಲಾ 30 ಸಾವಿರ ರೂ., ಹೊಸಾಡು ಗ್ರಾಮದ ಸಂಜೀವ ಕೊರಗ, ಸಾಕು ಕೊರಗ ಹಾಗೂ ಅಶ್ವಿನಿ ಕೊರಗದ ಮನೆಗೆ ತಲಾ 25 ಸಾವಿರ ರೂ. ಗಳಷ್ಟು ಹಾನಿ ಸಂಭವಿಸಿದೆ.
ಮುಂದಿನ ಎರಡು ದಿನಗಳ ಕಾಲವೂ ಕರಾವಳಿಯ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯುವುದಾಗಿ ಹವಾಮಾನ ಮುನ್ಸೂಚನೆ ತಿಳಿಸಿದೆ. ಕರ್ನಾಟಕದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ ಹಾಗೂ ಮಲ್ಪೆ ಬಂದರುಗಳಲ್ಲಿ ಎಚ್ಚರಿಕೆಯ ಸೂಚನೆಯಾಗಿ ಮೂರನೇ ನಂ.ನ್ನು ಪ್ರದರ್ಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಜಿಲ್ಲೆಯಲ್ಲಿ ಮಳೆ ವಿವರ :
ಗುರುವಾರ ಬೆಳಗಿನವರೆಗೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 86.4ಮಿ.ಮೀ. ಮಳೆಯಾದ ಬಗ್ಗೆ ವರದಿ ಬಂದಿದೆ.
ಬೈಂದೂರು 99.5ಮಿ.ಮೀ.
ಬ್ರಹ್ಮಾವರ 98.0ಮಿ.ಮೀ.
ಹೆಬ್ರಿ 90.3ಮಿ.ಮೀ.
ಕುಂದಾಪುರ 87.9ಮಿ.ಮೀ.
ಉಡುಪಿ 84.3ಮಿ.ಮೀ.
ಕಾಪು 74.3ಮಿ.ಮೀ.
ಕಾರ್ಕಳ 70.0ಮಿ.ಮೀ.