×
Ad

ಉಡುಪಿ ಮಹಿಷ ದಸರಾಕ್ಕೆ ಅನುಮತಿ ನಿರಾಕರಣೆ: ಪೊಲೀಸರ ವಿರುದ್ಧ ಜಯನ್ ಮಲ್ಪೆ ಆಕ್ರೋಶ

Update: 2023-10-13 14:38 IST

ಉಡುಪಿ, ಅ.13: ಅಂಬೇಡ್ಕರ್ ಯುವ ಸೇನೆ ಉಡುಪಿಯಲ್ಲಿ ಅ.15ರಂದು ನಡೆಸಲು ಉದ್ದೇಶಿಸಿರುವ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬವಾದ ಮಹಿಷಾ ದಸರಾಕ್ಕೆ ಕಾನೂನು ಸುವ್ಯವಸ್ಥೆಯ ಹಿತದೃಷಿಯ ನೆಪೆವೊಡ್ಡಿ ಪೊಲೀಸರು ಅನುಮತಿ ನಿರಾಕರಿಸಿರುವುದು ಸಂವಿಧಾನದ ಮೇಲೆ ಅತ್ಯಾಚಾರ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಆಕ್ರೋಶ ವ್ಯಕ್ತಪಡಿಸಿದ್ದಾರೆ.

  ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ತತ್ವಗಳ ಆಧಾರದ ಮೇಲೆ ರಚಿತವಾಗಿರುವ ನಮ್ಮ ಸಂವಿಧಾನದ ಅನುಛೇದ 25ರ ಪ್ರಕಾರ ಧರ್ಮ ಪ್ರಚಾರ ಮತ್ತು ಪಾಲನೆಗೆ ಸ್ವತಂತ್ರ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಜೆಗಳಿಗೆ ತನ್ನ 19(1)(ಎ)ವಿಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿದೆ. ಆದರೂ ಉಡುಪಿ ನಗರ ಠಾಣಾಧಿಕಾರಿ ಮಹಿಷಾ ದಸರಾದ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಸಲು ಅನುಮತಿ ನಿರಾಕರಿಸಿರುವುದು ಪ್ರಜಾಪ್ರುತ್ವದ ಕಗ್ಗೊಲೆ ಎಂದಿದ್ದಾರೆ.

ದಲಿತರ ಅಸ್ಮಿತೆಯಾಗಿರುವ ಮಹಿಷ ದಸರಾಕ್ಕೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವವರನ್ನು ಬಂಧಿಸುವುದನ್ನು ಬಿಟ್ಟು, ಸಂವಿಧಾನಬದ್ಧ ದಲಿತರ ಹಕ್ಕನ್ನೇ ಒಸಕಿ ಹಾಕಿರುವ ಪೊಲೀಸರ ವರ್ತನೆ ಭಯೋತ್ಪಾದಕರಿಗಿಂತ ಮಿಗಿಲಾಗಿದೆ ಎಂದು ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

 ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಉಗ್ರರ ಬೆದರಿಕೆ ಬಂದರೆ ಉಗ್ರರನ್ನು ಮಟ್ಟ ಹಾಕುತ್ತಾರೋ ಇಲ್ಲ ಪರ್ಯಾಯ ಮಹೋತ್ಸವವನ್ನು ನಿಲ್ಲಿಸುವಿರೋ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ. ನಾವು ಅಂಬೇಡ್ಕರ್ ಬರೆದ ಸಂವಿಧಾನವನ್ನು ಗೌರವಿಸುವವರು ಕಾನೂನನ್ನು ಎಂದೂ ಕೈಗೆತ್ತಿಕೊಂಡವರಲ್ಲ. ಸೌಹಾರ್ದ  ಬಯಸುವವರು. ನಮ್ಮದೇ ಮನೆಯಂತಿರುವ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಮಹಿಷನನ್ನು ಸ್ಮರಿಸಿ, ಗೌರವಿಸಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸುತ್ತೇವೆ ಎಂದಿರುವ ಅವರು, ಪೂರ್ವಾಗ್ರಹ ಪೀಡಿತ ಹಿಂದೂ ಧರ್ಮಾಂಧರ ಗೊಡ್ಡು ಬೆದರಿಕೆಗೆ ಅಂಜುವ ಪೊಲೀಸರಿಂದ ಇಲ್ಲಿ ಪ್ರಜಾಪ್ರುತ್ವದ ರಕ್ಷಣೆ ಖಂಡಿತಾ ಅಸಾಧ್ಯ. ನಮ್ಮ ಹಕ್ಕನ್ನು ನಾವೇ ಕಾಪಾಡಿಕೊಳ್ಳಬೇಕಾದ ಈ ಸರಕಾರಕ್ಕೆ ಸೂಕ್ತ ಸಂದರ್ದಲ್ಲಿ ರಾಜ್ಯದ ದಲಿತರು ಉತತಿರಿಸುತ್ತಾರೆ ಎಂದಿದ್ದಾರೆ.

 ಕೋಮುವಾದಿ, ಜಾತಿವಾದಿಗಳಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ಅಧಿಕಾರವಿದೆಯೆಂದು ದಲಿತ ಸಮುದಾಯವನ್ನು ತುಚ್ಚವಾಗಿ ಕಾಣುವುದು ಅಕ್ಷಮ್ಯ.ಅದಕ್ಕೆ ತಕ್ಕ ಶಾಸ್ತಿ ಮಾಡುವ ಶಕ್ತಿ ದಲಿತ ಸಮುದಾಯಗಳ ಮತದಾರರಿಗಿದೆ ಎಂದಿರುವ ಜಯನ್ ಮಲ್ಪೆ, ಮಹಿಷಾ ದಸರಾಕ್ಕೆ ತಡೆಯೊಡ್ಡುವುದಾಗಿ ಹೇಳಿರುವ ಸಂಘಪರಿವಾರ ಜಾತಿ ಸಂಘರ್ಷಕ್ಕೆ ಎಡೆಮಾಡುವ ಇವರ ದುರ್ವತನೆ, ಗೂಂಡಾಗಿರಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅ.15ರಂದು ಬೆಳಗ್ಗೆ 10.30ಕ್ಕೆ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ. ಇದು ನಮ್ಮ ಸಂವಿಧಾನ ಬದ್ಧ ಹಕ್ಕು ಎಂದು ಜಯನ್ ಮಲ್ಪೆ, ಅಂಬೇಡ್ಕರ್ ಯುವ ಸೇನೆಯ ಮುಖಂಡರಾದ ಹರೀಶ್ ಸಾಲ್ಯಾನ್, ದಯಾನಂದ ಕಪ್ಪೆಟ್ಟು, ಲೋಕೇಶ್ ಪಡುಬಿದ್ರೆ, ಸಂಜೀವ ಬಳ್ಕೂರು, ರಾಮ ಬೈಂದೂರು, ರಮೇಶ್ ಪಾಲ್, ಶಶಿಕಲಾ ತೊಟ್ಟಂ, ಗಣೇಶ್ ನೆರ್ಗಿ ಮುಂತಾದವರು ವಿನಂತಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News