×
Ad

ಉಡುಪಿ: ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ 30ಕ್ಕೆ ಪ್ರತಿಭಟನೆ

Update: 2025-05-29 00:03 IST

ಉಡುಪಿ: ಉಡುಪಿ ಜಿಲ್ಲಾ ‘ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ’ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೇ 30ರಂದು ಶುಕ್ರವಾರ ಸಂಜೆ 4ಗಂಟೆಗೆ ಉಡುಪಿ ಮಿಷನ್ ಕಾಂಪೌಂಡ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ -2025ರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಅಬ್ದುಲ್ ರೆಹಮಾನ್ ಕಲ್ಕಟ್ಟ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದೆ ಮೇ 13ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ, ಸೈನಿಕರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಮುಂದೂಡಲಾಗಿತ್ತು, ಅದನ್ನೀಗ ಮೇ 30ರಂದು ನಡೆಸಲು ಉದ್ದೇಶಿಸಲಾಗಿದೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯಿದೆ ಸಂವಿಧಾನ ವಿರೋಧಿಯಾಗಿದ್ದು ಈ ಕಾಯಿದೆ ನ್ಯಾಯದ ಬೇಡಿಕೆಗೆ ವಿರುದ್ಧವಾಗಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿರುವ ತಾರತಮ್ಯದ ನಿಲವನ್ನು ಹೊಂದಿದೆ. ಕೇಂದ್ರ ಸರಕಾರ ನಿರಂತರವಾಗಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಈ ಕಾಯ್ದೆ ಅದರ ಮುಂದುವರಿದ ಭಾಗವಾಗಿದೆ ಎಂದು ಕಲ್ಕಟ್ಟ ಹೇಳಿದರು.

ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಸಂವಿಧಾನದ ಪೀಠಿಕೆಗೆ ಇದು ವಿರುದ್ಧವಾಗಿದೆ. ವಕ್ಫ್ ಆಸ್ತಿ ನಾಶ ಹಾಗೂ ಮಸೀದಿಗಳಲ್ಲಿ ದೇವಾಲಯಗಳ ಹುಡುಕಾಟದ ಕೃತ್ಯಗಳಿಗೆ ಆಳುವ ವರ್ಗದ ಪರೋಕ್ಷ ಬೆಂಬಲ ಜಾಹೀರುಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಯ್ದೆಯ ಅನುಷ್ಠಾನ ಕಳವಳಕಾರಿಯಾಗಿದೆ ಎಂದವರು ನುಡಿದರು.

ತಾರತಮ್ಯದಿಂದ ಕೂಡಿದ ಸಂವಿಧಾನ ವಿರೋಧಿ ಕಾನೂನನ್ನು ಉಡುಪಿ ಜಿಲ್ಲೆಯ ಅಲ್ಪಸಂಖ್ಯಾ ಮತ್ತು ಪ್ರಜಾತಂತ್ರಪರ ಸಂಘಸಂಸ್ಥೆಗಳು, ವ್ಯಕ್ತಿಗಳು ಸಹ ತೀವ್ರವಾಗಿ ವಿರೋಧಿಸುತಿದ್ದಾರೆ. ಇದಕ್ಕಾಗಿ ವೇದಿಕೆ ಅಡಿಯಲ್ಲಿ ಮೇ 30ರಂದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಂಜೆ 4ಗಂಟೆಗೆ ಮಿಷನ್ ಕಾಂಪೌಂಡ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಕರೆಯಲಾಗಿದೆ. ಇದರಲ್ಲಿ 10,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಸಮಾವೇಶದಲ್ಲಿ ಅಖಿಲ ಭಾರತ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ಡಾ.ಕಾಸಿಮ್ ರಸೂಲ್ ಇಲ್ಯಾಸ್, ಸಮಾಜವಾದಿ ಪಕ್ಷದ ಕಾಂಪುರದ ಸಂಸದ ಮೌಲಾನ ಮುಹಿಬುಲ್ಲಾ, ಉಡುಪಿ-ಚಿಕ್ಕಮಗಳೂರು ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಚಿಂತಕ ಶಿವಸುಂದರ್, ಸಾಮಾಜಿಕ ಹೋರಾಟಗಾರ ನಿಕೇತ್‌ರಾಜ್ ಮೌರ್ಯ, ದಸಂಸ ಮುಖಂಡ ಸುಂದರ ಮಾಸ್ತರ್, ವಂ.ವಿಲಿಯಂ ಮಾರ್ಟಿಸ್ ಸೇರಿದಂತೆ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುಂದರ್ ಮಾಸ್ತರ್, ನಾಗೇಶ್ ಕುಮಾರ್ ಉದ್ಯಾವರ, ಮುಹಮ್ಮದ್ ಇದ್ರೀಸ್ ಹೂಡೆ, ಬಿಎಸ್‌ಎಫ್ ರಫೀಕ್, ಜಫ್ರುಲ್ಲಾ ಟಿ.ಎಂ., ರಿಯಾಝ್ ಕೋಡಿ, ಅಝೀಝ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News