ಉಡುಪಿ | ಅನುಮತಿ ಇಲ್ಲದೆ ಪ್ರತಿಭಟನೆ: ಎಬಿವಿಪಿ ಪ್ರಮುಖರ ವಿರುದ್ಧ ಪ್ರಕರಣ ದಾಖಲು

Update: 2024-04-24 05:16 GMT

ಉಡುಪಿ, ಎ.24: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಕೃತ್ಯ ಖಂಡಿಸಿ ಅನುಮತಿ ಇಲ್ಲದೆ ಎ.23ರಂದು ಉಡುಪಿ ನಗರದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಬಿವಿಪಿಯ ಪ್ರತಿಭಟನಾ ಜಾಥಾಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಆದರೂ ನಗರದ ಜೋಡುಕಟ್ಟೆಯಲ್ಲಿ ಅಂದಾಜು 300ರಷ್ಟು ಎಬಿವಿಪಿ ಕಾರ್ಯಕರ್ತರು ಅಕ್ರಮವಾಗಿ ಗುಂಪು ಸೇರಿ, ಅಲ್ಲಿಂದ ಕೆ.ಎಂ. ಮಾರ್ಗವಾಗಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದ್ದಾರೆ. ಅಲ್ಲದೆ ರಸ್ತೆಗೆ ಅಡ್ಡ ನಿಂತು ಸಾರ್ವಜನಿಕ ಸುಗಮ ಸಂಚಾರಕ್ಕೆ ತೊಂದರೆಯಾಗುವಂತೆ ಅಕ್ರಮ ಗುಂಪು ಸೇರಿದ್ದರು. ಪ್ರತಿಭಟನೆಗೆ ನಿರ್ಬಂಧಿತ ಸ್ಥಳವಾದ ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ರಸ್ತೆಯ ಮೇಲೆ ಕಾರ್ಯಕರ್ತರು ಕುಳಿತು ರಸ್ತೆ ತಡೆ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ಸಾರ್ವಜನಿಕರಿಗೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತಡೆಯನ್ನು ಉಂಟು ಮಾಡಿರುವುದಾಗಿ ದೂರಲಾಗಿದೆ.

ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಎಬಿವಿಪಿ ಮುಖಂಡರಾದ ಶ್ರೀವತ್ಸ್, ಗಣೇಶ್, ಅಜಿತ್ ಹರ್ಷಿತ್, ಮುರಳಿ ಮತ್ತು ಇತರರ ವಿರುದ್ಧ ಪ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿ ಕುಮಾರ್ ನಾಯ್ಕ್ ವಿ. ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News