×
Ad

ಉಡುಪಿ | ʼರಂಗಭೂಮಿʼ ಚೋಮನ ಮಕ್ಕಳ ಕಥೆ ಹೇಳುವ ಏಕೈಕ ಮಾಧ್ಯಮ: ಡಾ.ಜನಾರ್ದನ

‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ವಿಚಾರ ಸಂಕಿರಣ ಉದ್ಘಾಟನೆ

Update: 2025-11-23 16:59 IST

ಉಡುಪಿ, ನ.23: ಶಿವರಾಮ ಕಾರಂತರ ಕಾದಂಬರಿಯಲ್ಲಿ ಬರುವ ಚೋಮನ ಪರಂಪರೆಯವರು ಇಡೀ ಪ್ರಪಂಚದಲ್ಲಿ ಇದ್ದಾರೆ. ರಂಗಭೂಮಿ ಎಂಬ ಒಂದೇ ಒಂದು ಮಾಧ್ಯಮ ಚೋಮನ ಮಕ್ಕಳ ಕಥೆಯನ್ನು ಹೇಳುವ ಅತ್ಯಂತ ದೊಡ್ಡ ಸಾಧನವಾಗಿದೆ ಎಂದು ಹಿರಿಯ ರಂಗಕರ್ಮಿ ಡಾ.ಜನಾರ್ದನ(ಸನ್ನಿ) ಮೈಸೂರು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಿನೆಮಾದಲ್ಲಿ ಸಣ್ಣ ಮನುಷ್ಯರನ್ನು ದೊಡ್ಡದಾಗಿ ತೋರಿಸುತ್ತಾರೆ. ಆದರೆ ರಂಗಭೂಮಿ ಮನುಷ್ಯರನ್ನು ಇದ್ದ ಹಾಗೆ ತೋರಿಸುತ್ತದೆ. ಅಂದರೆ ಸತ್ಯವನ್ನು ತೋರಿಸುವ ಮಾಧ್ಯಮವಾಗಿದೆ. ಕಣ್ಣಿಗೆ ಕಣ್ಣು ಇಟ್ಟು ಮಾತನಾಡುವ ಏಕೈಕ ಸಾಧನ ರಂಗಭೂಮಿಯಾಗಿದೆ ಎಂದರು.

ಕನ್ನಡ ರಂಗಭೂಮಿ ಭಾರತ ದೇಶದಲ್ಲಿಯೇ ಹೊಸ ರೀತಿಯ ಆಯಾಮ ತೆರೆದುಕೊಂಡಿದೆ. ಕನ್ನಡ ರಂಗಭೂಮಿಯ ಹೊಸಹೊಸ ಪ್ರಯೋಗಗಳು ಭಾರತೀಯ ರಂಗಭೂಮಿಯ ಮುಖವಾಣಿಯಾಗಿ ಕೆಲಸ ಮಾಡಿದೆ. ಆ ಮೂಲಕ ಭಾರತೀಯ ರಂಗಭೂಮಿಯ ಮೇಲೆ ಬಳಷ್ಟು ಪರಿಣಾಮ ಬೀರಿದೆ. ಅವು ಎಲ್ಲವೂ ವಿಮರ್ಶೆ, ಚರ್ಚೆ, ಸಂವಾದ ಹಾಗೂ ಮರು ತಿದ್ದುಪಡಿಗೆ ಒಳಗಾಗಿದೆ ಎಂಬುದೇ ವಿಶೇಷ ಎಂದರು.

ಇಂದು ರಂಗಭೂಮಿ ತಂಡಗಳಿಗೆ ನಿಯಮಿತ ದೃಷ್ಟಿಕೋನದ ಚಳವಳಿ ಇಲ್ಲವಾಗಿದೆ. ರಂಗಭೂಮಿ ಎಂಬುದು ವಿಶ್ವಪ್ರಜ್ಞೆ ಬೆಳೆಸಲು ಹೆದ್ದಾರಿಯಾಗಿದೆ. ಅಲ್ಲಿ ನಿಂತು ನಾವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬೇಕಾಗಿದೆ. ರಂಗ ಕಲಾವಿದ ಸಾಮಾಜಿಕ ಚಳವಳಿ, ವಿಚಾರ ಸಂಕಿರಣ, ಸಂವಾದದ ಮೂಲಕ ತನ್ನನ್ನು ತಾನು ತಿದ್ದುಕೊಂಡು ಹೊಸ ರೂಪವಾಗಿ ದಾಟಿ ಹೋಗಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ, ರಂಗಭೂಮಿ ಇಂದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದೊಂದು ಅರಿವಿನ ದಾರಿಯಾಗಿದೆ. ನಮ್ಮನ್ನು, ನಮ್ಮ ಚಿಂತನೆಗಳನ್ನು ನಾವೆ ಒರೆಹಚ್ಚಿ ನಿರ್ಧರಿಸುವ ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಅರ್ಥೈಸಿಕೊಳ್ಳುವ ಮನರಂಜನೆಯನ್ನು ದಾಟಿದ ಅರಿವಿನ ಮಾಧ್ಯಮವಾಗಿದೆ. ಹಾಗಾಗಿ ನಾಟಕ ಇವತ್ತು ಆ ಮನರಂಜನೆಯ ಮಾಧ್ಯಮವಾಗಬೇಕಾದ ಅಗತ್ಯ ಇಲ್ಲ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಡಾ.ಟಿ.ಎಚ್.ಲವ ಕುಮಾರ್ ಮಾತನಾಡಿ, ನಾಟಕ ಎಂಬುದು ಕೇವಲ ಕ್ರಿಯೆ ಅಲ್ಲ. ರಂಗಭೂಮಿಯಲ್ಲಿ ಸೆಳೆತ ಇದೆ. ಆದುದರಿಂದ ಯುವಜನತೆ ಹೆಚ್ಚು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ರಂಗಭೂಮಿಯಲ್ಲಿ ಸಾಮಾಜಿಕ ಹೋರಾಟದ ಛಾಯೆ ಇದೆ. ಆ ಬಗ್ಗೆ ಅಗತ್ಯ ಚರ್ಚೆಗಳು ನಡೆಯಬೇಕಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

‘ರಾಜಕೀಯ ವಿಷಮತೆ ರಂಗಭೂಮಿಗೂ ಹರಡುತ್ತಿದೆ’

ನಾಟಕಗಳ ಗುಣಮಟ್ಟ ಪ್ರದರ್ಶನ, ಕಲಾವಿದರ ತಂಡಬದ್ಧತೆ ಮತ್ತು ರಂಗಬದ್ಧತೆ, ತಂಡದ ಆರ್ಥಿಕ ಪರಿಸ್ಥಿತಿ ಇವುಗಳ ಹಿನ್ನೆಲೆಯಲ್ಲಿ ಹವ್ಯಾಸಿ ರಂಗಭೂಮಿಯ ಇವತ್ತಿನ ಸ್ಥಿತಿ, ಮುಂದೆ ಇಡಬೇಕಾದ ಹೆಜ್ಜೆಗಳು, ಆತಂಕ ಹುಟ್ಟಿಸುವ ಕೆಲವು ತಂಡಗಳ ರಂಗ ನಡೆಗಳು ಮತ್ತು ರಂಗಧೋರಣೆಗಳ ಕುರಿತು ಚರ್ಚಿಸಬೇಕಾಗಿದೆ ಎಂದು ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ತಿಳಿಸಿದರು.

ಸಂಗೀತ, ಸಾಹಿತ್ಯ, ರಂಗಭೂಮಿ, ಸಿನೆಮಾ ಮೊದಲಾದ ಪ್ರದರ್ಶನ ಕಲೆಗಲ ಲೋಕದೊಳಗೆ ಮಾನವೀಯತೆ, ಧರ್ಮಾತೀತ ಗುಣ ಮತ್ತು ಕೋಮು ಸೌಹಾರ್ದತೆ ಮತ್ತು ಸಮಾನತೆಯ ಪ್ರಜ್ಞೆ ಅಂತರರ್ಗತವಾಗಿಯೇ ಇರುತ್ತದೆ ಎಂಬ ನಮ್ಮ ಬಹುವರ್ಷಗಳ ನಂಬಿಕೆಗಳಿಗೆ ಇಂದು ಕೊಡಲಿ ಯೇಟು ಬೀಳುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಹುಟ್ಟಿದ ವಿಷಮತೆಗಳು ಯಕ್ಷಗಾನವನ್ನು ಅಪೋಷನ ತೆಗೆದುಕೊಂಡಿದ್ದು, ಇದೀಗ ರಂಗಭೂಮಿಗೂ ಬಹಳ ವೇಗವಾಗಿ ಹರಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News