ಉಡುಪಿ | ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಪೊಲೀಸ್ ಇಲಾಖೆಗೆ ಹೊಸ ಜೀಪ್ ಹಸ್ತಾಂತರ
ಉಡುಪಿ, ಡಿ.6: ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹೊಸ ಬೊಲೇರೋ ಜೀಪ್‌ನ್ನು ಕೊಡುಗೆಯಾಗಿ ನೀಡಿದ್ದು, ಇಂದು ಸಂಜೆ ಉಡುಪಿ ಎಸ್ಪಿ ಕಚೇರಿಯಲ್ಲಿ ವಾಹನದ ಹಸ್ತಾಂತರ ನಡೆಯಿತು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ನೂತನ ವಾಹನದ ಕೀಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಹಸ್ತಾಂತರಿಸಿ ಹೊಸ ವಾಹನಕ್ಕೆ ಹಸಿರು ನಿಶಾನೆ ತೋರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಎನ್.ರಾಜೇಂದ್ರಕುಮಾರ್, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲೇ ಪೊಲೀಸ್ ಇಲಾಖೆ ಬಹಳಷ್ಟು ಸವಾಲುಗಳನ್ನು ಎದುರಿಸಿಕೊಂಡು ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಎಲ್ಲರಿಗೂ ಬೇಕಾದ ಇಲಾಖೆ. ನಮ್ಮೆಲ್ಲರ ಸುರಕ್ಷತೆಯನ್ನು ನೋಡಿಕೊಳ್ಳುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಬಹುದೊಡ್ಡ ಜವಾಬ್ದಾರಿ. ನಾವು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಮನವಿಗೆ ಸ್ಪಂದಿಸಿ ಎರಡು ವಾಹನವನ್ನು ಒದಗಿಸಿದ್ದೇವೆ. ಅದೇ ರೀತಿ ಉಡುಪಿ ಎಸ್ಪಿಯವರ ಮನವಿಯನ್ನು ಸಂತೋಷದಿಂದ ಒಪ್ಪಿಕೊಂಡು ಇದೀಗ ಬೊಲೇರೋ ವಾಹನವನ್ನು ನೀಡಿದ್ದೇವೆ ಎಂದರು.
ಇದಕ್ಕೆ ಮೊದಲು ನಡೆದ ಸರಳ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಇಲಾಖೆಯ ಮನವಿಗೆ ಪೂರಕವಾಗಿ ಸ್ಪಂಧಿಸಿ ವಾಹನವೊಂದನ್ನು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಡಾ.ರಾಜೇಂದ್ರಕುಮಾರ್ ಅವರನ್ನು ಇಲಾಖೆಯ ವತಿಯಿಂದ ಸ್ಮರಣಿಕೆಗಳೊಂದಿಗೆ ಆತ್ಮೀಯವಾಗಿ ಸನ್ಮಾನಿಸಿತು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಲ್ಲೊಬ್ಬರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಡಿವೈಎಸ್ಪಿ ಡಿ.ಟಿ ಪ್ರಭು, ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯ ಹಲವಾರು ವಾಹನಗಳು 15 ವರ್ಷಗಳನ್ನು ಪೂರೈಸಿದ್ದು, ಕೆಲ ವಾಹನಗಳು ದುರಸ್ತಿಯಲ್ಲಿ ಇರುವುದರಿಂದ ಇಲಾಖೆಗೆ ಕರ್ತವ್ಯ ನಿರ್ವಹಿಸಲು ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಸಿಎಸ್‌ಆರ್ ಫಂಡ್ ಮೂಲಕ ವಾಹನ ಒದಗಿಸುವಂತೆ ಇಲಾಖೆ ಮನವಿ ಸಲ್ಲಿಸಿತ್ತು.