ಉಡುಪಿ | ಬೇಟೆಗಾಗಿ ಗುಂಡು ಹಾರಿಸಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಹಿರಿಯಡ್ಕ: ಬೇಟೆಯ ವೇಳೆ ಬಂದೂಕಿನಿಂದ ಹಾರಿದ ಗುಂಡು ಕಾರು ಮತ್ತು ಮನೆ ಬಾಗಿಲಿಗೆ ಬಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹಿರಿಯಡ್ಕ ಪೊಲೀಸರು ಸೆ.10ರಂದು ಬಂಧಿಸಿದ್ದಾರೆ.
ಕುದಿ ಗ್ರಾಮದ ಕೊಂಡಾಡಿಯ ಪ್ರದೀಪ್ (32) ಹಾಗೂ ಹಿರಿಯಡ್ಕ ಗುಡ್ಡೆಯಂಗಡಿಯ ಮನೋಜ್ (25) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 50 ಸಾವಿರ ರೂ. ಮೌಲ್ಯದ ಪರವಾನಿಗೆರಹಿತ ತೋಟೆ ಕೋವಿ, ಏಳು ತೋಟೆಗಳು ಹಾಗೂ 40 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆ. 1ರಂದು ನಸುಕಿನ ವೇಳೆ ಕಣಜಾರು ಗುರುರಾಜ್ ಮಂಜಿತ್ತಾಯರವರ ಮನೆಯ ಸಮೀಪದ ಹಾಡಿಯಲ್ಲಿ ಬೇಟೆ ಶಿಕಾರಿ ನಡೆಸುತ್ತಿದ್ದ ಅಪರಿಚಿತರ ಬಂದೂಕಿನಿಂದ ಗುಂಡು ಹಾರಿದ್ದು, ಆ ಗುಂಡು ಗುರುರಾಜ್ ಎಂಬವರ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗಾಜಿಗೆ ತಾಗಿ ನಂತರ ಮರದ ಬಾಗಿಲಿಗೆ ಬಡಿದಿತ್ತು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಷೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಮಾರ್ಗದರ್ಶನದಲ್ಲಿ, ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ., ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಗಳಾದ ಪುನೀತ್ ಕುಮಾರ್ ವಿಠಲ ಮಲವಾಡಕರ್ ಹಾಗೂ ಸಿಬ್ಬಂದಿ ಪ್ರವೀಣ್ ರೈ, ಕೃಷ್ಣ, ಕಾರ್ತಿಕ್ ಕಾರ್ಯಾಚರಣೆ ನಡೆಸಿದ್ದಾರೆ.