ಉಡುಪಿ: ಡಿಎಆರ್ ಪೊಲೀಸ್ ವಸತಿಗೃಹಗಳಲ್ಲಿ ಕಳ್ಳತನ!
ಉಡುಪಿ, ಫೆ.24: ನಗರದ ಚಂದು ಮೈದಾನದ ಬಳಿ ಇರುವ ಡಿಎಆರ್(District Armed Reserve) ಪೊಲೀಸ್ ವಸತಿ ಗೃಹಕ್ಕೆ ಫೆ.24ರ ನಸುಕಿನ ವೇಳೆ ನುಗ್ಗಿದ ಕಳ್ಳರು ಕೆಲವು ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ಮೂರು ವಸತಿ ಸಮುಚ್ಚಯದಲ್ಲಿ ಒಟ್ಟು 28 ಮನೆಗಳಿದ್ದು, ಇದರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ರಾಘವೇಂದ್ರ ಹಾಗೂ ರವಿರಾಜ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಪಾಟಿನ ಬೀಗ ತೆರೆದು ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ.
ರಾಘವೇಂದ್ರ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದು, ಇವರ ಮನೆಯಲ್ಲಿ ಯಾರು ಇರಲಿಲ್ಲ. ಅದೇ ರೀತಿ ರವಿರಾಜ್ ಫೆ.23ರಂದು ತಡರಾತ್ರಿ ಮನೆಗೆ ಬೀಗ ಹಾಕಿ ಕರ್ತವ್ಯಕ್ಕೆ ತೆರಳಿದ್ದರು. ಈ ವೇಳೆ ನುಗ್ಗಿದ ಕಳ್ಳರು, ರಾಘವೇಂದ್ರ ಅವರ ಮನೆಯಲ್ಲಿದ್ದ ಬೆಳ್ಳಿಯ ಕಾಲುಗೆಜ್ಜೆ ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ರವಿರಾಜ್ ಮನೆಯಲ್ಲಿ ಯಾವುದೇ ಸೊತ್ತುಗಳು ಕಳವಾಗಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ನಗರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ತನಿಖೆ ಮುಂದುವರಿದಿದೆ.