ಉಡುಪಿ: ಜ.17ರಂದು ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದಿಂದ ವೈವಿಧ್ಯಮಯ ಕಾರ್ಯಕ್ರಮ
ಉಡುಪಿ, ಜ.16: ಶೀರೂರು ಪರ್ಯಾಯ ಪ್ರಯುಕ್ತ ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗ ನಾಳೆ ಜ.17ರಂದು ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದ ಎದುರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬಳಗದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಯತೀಶ್ ಕರ್ಕೇರ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 3ರವರೆಗೆ ಜಿಲ್ಲೆಯ ವಿವಿದೆಡೆಗಳಿಂದ ಬರುವ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಮೂರು ಗಂಟೆಗೆ ರಾಜ್ಯಮಟ್ಟದ ಭಕ್ತಿ ಪ್ರಧಾನ ನೃತ್ಯ ಸ್ಪರ್ಧೆ ನಡೆಯಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಬೆಳಗ್ಗೆ 9ಗಂಟೆಗೆ ಕಾಂಗ್ರೆಸ್ ನಾಯಕರೂ ಉದ್ಯಮಿಗಳೂ ಆದ ಪ್ರಸಾದ್‌ರಾಜ್ ಕಾಂಚನ್ ಹಾಗೂ ಸೂರ್ಯಪ್ರಕಾಶ್ ಅವರು ಚಾಲನೆ ನೀಡಲಿದ್ದಾರೆ ಎಂದ ಅವರು ಅಪರಾಹ್ನ 3:00ಗಂಟೆಗೆ ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸುವರು. ಸಂಜೆ 7ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಬಳಿಕ 7:30ರಿಂದ ಜಿಲ್ಲೆಯ ಪ್ರಸಿದ್ಧ ಮೆಕ್ಕೆಕಟ್ಟೆ ಮೇಳದಿಂದ ಯಕ್ಷಗಾನ ‘ದೇವಿ ಮಹಾತ್ಮೆ’ ಪ್ರದರ್ಶನ ನಡೆಯಲಿದೆ ಎಂದೂ ಯತೀಶ್ ಕರ್ಕೆರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮುರಳಿ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕೃಷ್ಣ ಶೆಟ್ಟಿ ಬಜಗೋಳಿ, ಅಕ್ಷತ ಪೈ, ಸುಧಾಕರ್, ಸೂರಜ್ ಕಲ್ಮಾಡಿ ಉಪಸ್ಥಿತರಿದ್ದರು.