×
Ad

ಉಡುಪಿ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆ

Update: 2026-01-20 19:10 IST

ಉಡುಪಿ, ಜ.20: ನಮ್ಮ ವೈಯುಕ್ತಿಕ ಸಿದ್ದಾಂತಗಳನ್ನು ಬದಿಗಿರಿಸಿ ಪ್ರತಿಯೊಬ್ಬ ವ್ಯಕ್ತಿ ನಮ್ಮವರು ಎಂಬ ಭಾವನೆ ಯಲ್ಲಿ ಕಂಡಾಗ ದೇಶದಲ್ಲಿ ಐಕ್ಯತೆಯನ್ನು ಕಾಣಲು ಸಾಧ್ಯ ಎಂದು ತೀರ್ಥಹಳ್ಳಿ ಚರ್ಚಿನ ಧರ್ಮಗುರು ವಂ.ವಿರೇಶ್ ಮೋರಾಸ್ ಹೇಳಿದ್ದಾರೆ.

ಸೋಮವಾರ ನಡೆದ ಉಡುಪಿ ವಲಯ ಮಟ್ಟದ ಕ್ರೈಸ್ತ ಐಕ್ಯತಾ ಸಪ್ತಾಹದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಅವರು ಸಂದೇಶ ನೀಡಿದರು.

ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕವಿಗಳು ಹಾಡಿ ಹೊಗಳಿದ್ದು ಅದರಂತೆ ಬಾಳಲು ಪ್ರತಿಯೊಬ್ಬರು ಒಗ್ಗಟ್ಟಿನಿಂದ ಬದುಕಿದಾಗ ಮಾತ್ರ ಸಾಧ್ಯವಾಗುತ್ತದೆ. ವಿವಿಧ ಕ್ರೈಸ್ತ ಸಭೆಗಳು ಒಂದಾಗಿ ದೇಶದಲ್ಲಿನ ಸಮಸ್ಯೆಗಳಿಗೆ ದನಿ ಎತ್ತುವ ಕಾರ್ಯ ನಡೆಯಬೇಕು ಈ ಮೂಲಕ ನಾವೆಲ್ಲರೂ ಕೂಡ ಒಂದೇ ಎನ್ನುವ ಭಾವನೆಯನ್ನು ಮೂಡಿಸಲು ಸಾಧ್ಯವಿದೆ ಎಂದರು.

ಐಕ್ಯತಾ ಸಭೆಯ ನೇತೃತ್ವ ವಹಿಸಿದ್ದ ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಪರರ ಕಷ್ಟ ಸಂಕಷ್ಟಗಳಿಗೆ ನಾವು ಸ್ಪಂದಿಸುವುದರ ಮೂಲಕ ಐಕ್ಯತಾ ಮನೋ ಭಾವವನ್ನು ವೃದ್ಧಿಗೊಳಿಸಬೇಕು. ಪರರ ನೋವಿಗೆ ದನಿಯಾದಾಗ ಅವರಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯವಿದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಗಳನ್ನು ಮರೆತು ಜೊತೆಯಾಗಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.

ಸಿಎಸ್‌ಐ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ವಂ.ಹೇಮಚಂದ್ರ ಕುಮಾರ್ ಮಾತನಾಡಿ, ಐಕ್ಯತಾ ಸಪ್ತಾಹ ಕ್ರೈಸ್ತ ಸಭೆಗಳನ್ನು ಬಲಗೊಳಿಸಲು ಸಹಕಾರಿಯಾಗಲಿ. ಈ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಲಿ ಎಂದು ಹಾರೈಸಿದರು.

ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀಫನ್ ಡಿಸೋಜ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಸಿಎಸ್‌ಐ ಸಭೆಯ ವಂ. ಕಿಶೋರ್, ವಂ.ಸಂತೋಷ್, ರೋಮನ್ ಕ್ಯಾಥೊಲಿಕ್, ಸಿಎಸ್‌ಐ, ಸಿರೋಮಲಬಾರ್, ಸಹಿತ ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡಿದ್ದರು.

ಯುನೈಟೆಡ್ ಕ್ರಿಶ್ಚಿಯನ್ ಫೋರಂನ ಉಪಾಧ್ಯಕ್ಷ ಪ್ರಶಾಂತ್ ಜತ್ತನ್ನ ಸ್ವಾಗತಿಸಿದರು. ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತ ಐಕ್ಯತಾ ಆಯೋಗದ ನಿರ್ದೇಶಕ ವಂ.ಲಿಯೊ ಪ್ರವೀಣ್ ಡಿಸೋಜ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News