ಪಟ್ಲಬೈಲು ನಿರ್ಮಾಣ ಹಂತದ ಸೇತುವೆ ಕುಸಿತ; ಆಮೆಗತಿಯ ಕಾಮಗಾರಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಉಡುಪಿ: ಮಣಿಪಾಲ-ಬಜಪೆ ರಾಜ್ಯ ಹೆದ್ದಾರಿಯ ಆತ್ರಾಡಿ ಸಮೀಪ ಹಿರೇಬೆಟ್ಟು ಗ್ರಾಮದ ಪಟ್ಲಬೈಲು ಎಂಬಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದಿದ್ದು ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ವಿರುದ್ಧ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.
ಪಟ್ಲಬೈಲು ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಂಪರ್ಕ ರಸ್ತೆ ಕಡಿತಗೊಂಡಿದೆ. ಯಾವುದೇ ವಾಹನಗಳು ಸಂಚರಿಸಲು ಆಗದ ಪರಿಸ್ಥಿತಿ ಇದೆ. ಪರ್ಯಾಯ ಸಂಪರ್ಕ ರಸ್ತೆ ಮಾಡಿದ್ದರೂ, ಕೂಡ ನೆರೆ ನೀರಿನಿಂದ ಕೊಚ್ಚಿ ಹೋಗಿದೆ. ಜನರಿಗೆ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಮಾತ್ರವಲ್ಲ ಅನೇಕ ಕೃಷಿ ಭೂಮಿ ಕೂಡ ನೀರು ಪಾಲಾಗಿದೆ. ಆದುದರಿಂದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸು ವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ವಿನಯಕುಮಾರ ಸೊರಕೆ, ಕಾಮಗಾರಿಯ ವಿಳಂಬ ನೀತಿಯನ್ನು ಖಂಡಿಸಿ, ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಂಜುನಾಥ ನಾಯಕ್ ಹಾಜರಿದ್ದರು.
ರಸ್ತೆ ಸಂಪರ್ಕ ಕಡಿತದಿಂದ ಊರಿನ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿನಯ್ ಕುಮಾರ್ ಸೊರಕೆ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. 20 ದಿನದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಪಂ ಮಾಜಿ ಸದಸ್ಯ ಗುರುದಾಸ ಭಂಡಾರಿ, ಆತ್ರಾಡಿ ಗ್ರಾಪಂ ಸದಸ್ಯ ಸುಧೀರ್ ಕುಮಾರ್ ಪಟ್ಲ, ಸುರೇಶ ನಾಯ್ಕ, ಯತೀಶ ಶೆಟ್ಟಿ, ಮಾಜಿ ತಾಪಂ ಸದಸ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಸಹನಾ ಕಾಮತ್, ಗಣೇಶ ಶೆಟ್ಟಿ, ಕೊಡಂಗಳ ವಿಠಲ ನಾಯಕ, ಉಡುಪಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮಹಾದೇವ ನಾಯಕ್, ಗೋಪಾಲ ಮರ್ಣೆ, ಕೇಶವ ಭಂಡಾರಿ, ವಾಸುದೇವ ಭಟ್ಟ, ಗೋಪಾಲ ಮೂಲ್ಯ, ನಾಗೇಶ ನಾಯಕ್, ಮನೋಹರ ಕಾಮತ್, ಜಯಪ್ರಕಾಶ ಕಾಮತ್, ಜಗದೀಶ ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು.