×
Ad

ಸರಕಾರಿ ಶಾಲೆ ಉಳಿಸಲು ಗ್ರಾಮಸ್ಥರು ಮುಂದಾಗಲಿ: ಬಾಬು ಶೆಟ್ಟಿ

Update: 2026-01-16 19:30 IST

ಕುಂದಾಪುರ, ಜ.16: ಗ್ರಾಮಸ್ಥರು, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದಲ್ಲಿ ಸರಕಾರಿ ಶಾಲೆಗಳ ಉಳಿವು ಸಾಧ್ಯ. ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ಹೆಚ್ಚಿಸುವ ಪ್ರಯತ್ನ ಆಗಬೇಕು. ಪ್ರತೀ ಗ್ರಾಮದಲ್ಲೂ ಮಕ್ಕಳಿಲ್ಲದೆ ಅನೇಕ ಸರಕಾರಿ ಶಾಲೆ ಮುಚ್ಚುವಂತಹ ಪರಿಸ್ಥಿತಿಯಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಸರಕಾರಿ ಶಾಲೆಗಳನ್ನು ಉಳಿಸಲು ಪಣ ತೊಡಬೇಕು ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದ್ದಾರೆ.

ಕರ್ಕುಂಜೆ ಶಾಲೆಯ ವಾರ್ಷಿಕೋತ್ಸವ ಹೊಂಗಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸರಕಾರ ಈಗ ಎಲ್ಲ ಸೌಲಭ್ಯ ಗಳನ್ನು ನೀಡುತ್ತಿದೆ. ಆದರೂ ಸಹ ಮಕ್ಕಳ ಸಂಖ್ಯೆ ಹೆಚ್ಚಿಸಲು ಕಷ್ಟವಾಗುತ್ತಿದೆ. ಕೌನ್ಸೆಲಿಂಗ್ ಮೂಲಕ ಬಹಳಷ್ಟು ಉತ್ತಮ ಶಿಕ್ಷಕರು ಸರಕಾರಿ ಶಾಲೆಗಳಿಗೆ ಬರುತ್ತಿದ್ದಾರೆ. ಆದರೆ ನಾವು ಅದರ ಸದುಪಯೋಗ ಪಡೆಯುತ್ತಿಲ್ಲ ಎಂದರು.

ಕರ್ಕುಂಜೆ ಗ್ರಾಪಂ ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ ಕುಮಾರ್ ಶೆಟ್ಟಿ ಜಾಡ್ಕಟ್ಟು, ಹಿರಿಯರಾದ ನಾರಾಯಣ ನಾಯಕ್ ನೇರಳಕಟ್ಟೆ, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ವಕೀಲ ಅಶೋಕ ಶೆಟ್ಟಿ ಹಂದಕುಂದ, ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘ ಕರ್ಕುಂಜೆಯ ಅಧ್ಯಕ್ಷ ಸುಧಾಕರ ಶೆಟ್ಟಿ ಬಾಂಡ್ಯ, ಗ್ರಾಪಂ ಸದಸ್ಯರಾದ ನಾಗರಾಜ ಶೆಟ್ಟಿ ಜೆಡ್ಡಿನಕೊಡ್ಲು, ಸಂತೋಷ ಪೂಜಾರಿ, ಸತೀಶ ಪೂಜಾರಿ, ಉದ್ಯಮಿ ಜಯಸೂರ್ಯ ಪೂಜಾರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಪತ್ರಕರ್ತ ಎ.ಭಾಸ್ಕರ ಶೆಟ್ಟಿ, ವಿದ್ಯಾರ್ಥಿ ನಾಯಕಿ ಶ್ರೇಯಾ ವಿ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ನಾರಾಯಣ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದ್ರ ಶೆಟ್ಟಿ ವರದಿ ವಾಚಿಸಿದರು. ಶಿಕ್ಷಕಿ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News