×
Ad

ವಿಶ್ವಕರ್ಮ ಸಮುದಾಯ ಒಂದಾಗಬೇಕು: ಜಯಪ್ರಕಾಶ್ ಹೆಗ್ಡೆ

Update: 2023-09-17 19:25 IST

ಉಡುಪಿ, ಸೆ.17: ವಿಶ್ವಕರ್ಮ ಸಮುದಾಯದವರು ಒಂದಾಗಬೇಕು. ತಮ್ಮ ಸಂಘಟನೆ ಮೂಲಕ ಬಲವನ್ನು ತೋರಿಸ ಬೇಕು. ಆಗ ಮಾತ್ರ ಸಮುದಾಯದ ಪ್ರಗತಿ ಸಾಧ್ಯವಾಗುತ್ತದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಉಡುಪಿ ನೇತೃತ್ವದಲ್ಲಿ ವಿಶ್ವಕರ್ಮ ಒಕ್ಕೂಟ ಮತ್ತು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಉಡುಪಿ ಇವುಗಳ ಸಹಕಾರದಲ್ಲಿ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಲಾದ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ವಿಶ್ವಕರ್ಮ ಸಮುದಾಯದ ಹೆಣ್ಣುಮಕ್ಕಳು ಮುಖ್ಯವಾಹಿನಿಗೆ ಬರುವಂತಾಗಬೇಕು. ಪಾಲಕರು ತಮ್ಮ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪುರಾಣ ಇತಿಹಾಸದ ಪುಟ ತೆರೆದಾಗ ವಿಶ್ವಕರ್ಮ ಅವರ ಶ್ರೇಯಸ್ಸು ಏನೆಂಬುದು ತಿಳಿಯುತ್ತದೆ. ಜಗದಲ್ಲಿ ಹಲವಾರು ದೇಗುಲಗಳನ್ನು ನಿರ್ಮಿಸಿದ ಖ್ಯಾತಿ ಅವರದ್ದು. ಉಡುಪಿ ಜಿಲ್ಲೆಯ ದೇವಾಲಯಗಳಲ್ಲೂ ವಿಶ್ವಕರ್ಮರ ಕೆಲಸದಲ್ಲಿ ಕೌಶಲ್ಯವನ್ನು ಕಾಣಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯರಾದ ಕಬ್ಬಿಣದ ಶಿಲ್ಪಿಬಾಲಕಟ್ಟ ಕೃಷ್ಣಯ್ಯ ಆಚಾರ್ಯ, ಕಾಷ್ಟ ಶಿಲ್ಪಿ ರಂಜಾಳ ಸೀತಾರಾಮ ಆಚಾರ್ಯ, ಕಂಚು ಶಿಲ್ಪಿ ಬಿಳಿಯಾರು ವಿಠ್ಠಲ ಆಚಾರ್ಯ, ಶಿಲಾ ಶಿಲ್ಪಿ ರಾಮಕೃಷ್ಣ ಆಚಾರ್ಯ ಹಾಗೂ ಸುವರ್ಣ ಶಿಲ್ಪಿ ಕೃಷ್ಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ವಿದ್ವಾನ್ ಚಂದ್ರಕಾಂತ ಪುರೋಹಿತ್ ಉಪನ್ಯಾಸ ನೀಡಿದರು. ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷ ಕೆ.ವೆಂಕಟೇಶ ಆಚಾರ್ಯ, ದ.ಕ. ಮತ್ತು ಉಡುಪಿ ಜಿಲ್ಲೆ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಸಂಘಟನೆ ಕಾರ್ಯದರ್ಶಿ ಹರೀಶ್ ಆಚಾರ್ಯ, ಕೋಶಾಧಿಕಾರಿ ದಿವಾಕರ ಆಚಾರ್ಯ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಬಿ.ಎ.ಆಚಾರ್ಯ ಮಣಿಪಾಲ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News