ಡಿ.19ರಿಂದ ಗದ್ದೆಗಳಿಗೆ ಹರಿಯಲಿದೆ ಸೌಕೂರು ಏತ ನೀರಾವರಿ ಘಟಕದ ನೀರು; ಮತ್ತೆ ಬಿರುಸುಗೊಳ್ಳಲಿದೆ ಸುಗ್ಗಿ ಕೃಷಿ ಚಟುವಟಿಕೆ
‘ವಾರ್ತಾಭಾರತಿ’ ವರದಿ ಫಲಶ್ರುತಿ
ಕುಂದಾಪುರ, ಡಿ.18: ಸುಗ್ಗಿ ಬೆಳೆಗೆ ನೀರು ಸಿಗದೇ ಪರಿಸರದ ರೈತರಲ್ಲಿ ಆತಂಕ ಮೂಡಿಸಿದ್ದ ಸೌಕೂರು ಏತ ನೀರಾವರಿ ಯೋಜನೆಯ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಮೆಸ್ಕಾಂ, ಘಟಕಕ್ಕೆ ವಿದ್ಯುತ್ ಸಂಪರ್ಕವನ್ನು ಮತ್ತೆ ನೀಡಿದ ಬಳಿಕ ಸ್ಥಾಗುರುವಾರ ಸೌಕೂರು ಏತ ನೀರಾವರಿ ಘಟಕದಲ್ಲಿರುವ ಮುಖ್ಯ ಟ್ಯಾಂಕಿಗೆ ನೀರನ್ನು ಎತ್ತುಗಡೆ (ಲಿಫ್ಟ್) ಮಾಡಲಾಗಿದೆ.
ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗದಿದ್ದಲ್ಲಿ ಡಿ.19 (ಶುಕ್ರವಾರ) ರಿಂದ ಚೆಕ್ ಡ್ಯಾಂಗಳು ಹಾಗೂ ಪೈಪ್ ಗಳಿಗೆ ಯೋಜನೆಯ ನೀರು ಮತ್ತೆ ಹರಿದು ಬರಲಿದೆ. ಅಲ್ಲಿಂದ 8 ಗ್ರಾಮಗಳ 1350 ಹೆಕ್ಟೇರ್ ಕೃಷಿ ಭೂಮಿಗೆ ಈ ನೀರು ಪೂರೈಕೆಯಾಗಲಿದೆ.
ಸುಮಾರು ಎರಡು ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಇದ್ದ ಕಾರಣಕ್ಕೆ ಕಳೆದ ಮಳೆಗಾಲದಿಂದ ಗುಲ್ವಾಡಿ ಯಲ್ಲಿರುವ ಏತ ನೀರಾವರಿ ಘಟಕಕ್ಕೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಇದರಿಂದ ರೈತರ ಹಿಂಗಾರು ಕೃಷಿ ಬೆಳೆಗೆ ಸಿದ್ಧತೆ ಪ್ರಾರಂಭಿಸಿದ್ದರೂ, ಯೋಜನಾ ಘಟಕದಿಂದ ನಿಗದಿಯಾದಂತೆ ನೀರು ಹರಿಯುವಿಕೆ ಆರಂಭ ಗೊಂಡಿರಲಿಲ್ಲ.
ರೈತರ ಆತಂಕವನ್ನು ಪ್ರತಿಬಿಂಬಿಸಿ, ಸೌಕೂರು ಏತ ನೀರಾವರಿ ಯೋಜನೆ ನೀರನ್ನು ವಿದ್ಯುತ್ ಬಿಲ್ ಬಾಕಿ ಕಾರಣಕ್ಕೆ ಇನ್ನೂ ಬಿಡದಿರುವ ಕುರಿತಂತೆ ಡಿ.11ರಂದು ’ವಾರ್ತಾಭಾರತಿ’ ವಿಶೇಷ ವರದಿ ಪ್ರಕಟಿಸಿ, ರೈತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು.
ಎಂಎಲ್‌ಸಿ ಭಂಡಾರಿ ಸ್ಪಂದನೆ: ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ದಿನವೇ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಬೆಳಗಾವಿ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ತುರ್ತಾಗಿ ಪತ್ರ ಬರೆದು, ಕೂಡಲೇ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ತಕ್ಷಣ ಸ್ಪಂಧಿಸಿದ ಡಿಕೆಶಿ, ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ, ಕ್ರಮಕ್ಕೆ ಸೂಚಿಸಿದ್ದರು.
ಹೀಗಾಗಿ ಹಿಂಗಾರು ಕೃಷಿ ಋತು ಆರಂಭವಾದರೂ ಗದ್ದೆಗೆ ನೀರು ಬರದೇ ರೈತರಿಗಾದ ಸಮಸ್ಯೆ ಇದೀಗ ಬಗೆ ಹರಿಯುವ ಕಾಲ ಸನ್ನಿಹಿತವಾಗಿದ್ದು, ಒಂದೆರಡು ದಿನಗಳಲ್ಲಿ ಗದ್ದೆಗಳಿಗೆ ನೀರು ಹರಿದು ಕೃಷಿ ಕಾರ್ಯ ಪುನರಾರಂಭ ಗೊಳ್ಳುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದೇ ನೀರನ್ನು ನಂಬಿಕೊಂಡು ಭತ್ತದ ಎರಡನೇ ಬೆಳೆ ಸೇರಿದಂತೆ ವಿವಿಧ ಸುಗ್ಗಿ ಬೆಳೆಗೆ ಸನ್ನದ್ಧರಾಗಿದ್ದ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.