×
Ad

ಪಕ್ಷದೊಳಗಿನ ವಿಚಾರವನ್ನು ನಾವು ಆಂತರಿಕವಾಗಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ: ಸಚಿವ ಸತೀಶ್ ಜಾರಕಿಹೊಳಿ

Update: 2025-02-17 20:35 IST

ಸಚಿವ ಸತೀಶ್ ಜಾರಕಿಹೊಳಿ

ಉಡುಪಿ: ಪಕ್ಷದೊಳಗಿನ ವಿಚಾರವನ್ನು ನಾವು ಆಂತರಿಕವಾಗಿ ಚರ್ಚಿಸಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುತ್ತೇವೆ. ಏನೂ ಸಮಸ್ಯೆ ಇಲ್ಲ ಎನ್ನುವುದು ನಮ್ಮ ಭಾವನೆ. ಏನು ಸಮಸ್ಯೆಯಾಗಿದೆ ಎಂದು ಅವರನ್ನೇ ಕೇಳಿ ತಿಳಿದುಕೊಳ್ಳುತ್ತೇನೆ. ನಾನೇ ನೇರವಾಗಿ ಅವರನ್ನು ಕೇಳುತ್ತೇನೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಿದ್ದರು.

ಸಿಎಂ ಹೆಸರನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆ ಹಾಗೂ ಅದಕ್ಕೆ ಸಚಿವ ರಾಜಣ್ಣ ನೀಡಿದ ಪ್ರತಿಕ್ರಿಯೆ ಕುರಿತು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು. ಅದು ನಮ್ಮ ಪಕ್ಷದೊಳಗಿನ ವಿಚಾರವಾಗಿದ್ದು, ಪಕ್ಷದೊಳಗೆ ಕುಳಿತು ಚರ್ಚೆ ಮಾಡಬೇಕು ಎಂದರು.

ಡಿಕೆಶಿ ಹಾಗೂ ರಾಜಣ್ಣ ಅವರ ಹೇಳಿಕೆಯ ಮಧ್ಯೆ ನಾವು ಬರಲು ಸಾಧ್ಯವಿಲ್ಲ. ಅವರವರ ಹೇಳಿಕೆಗಳಿಗೆ ಅವರೇ ಉತ್ತರ ನೀಡಬೇಕು. ರಾಜಣ್ಣ ಇರೋದೇ ಹಾಗೆ. ಅವರಿಗೆ ಯಾರ ಮೇಲೂ ಸಿಟ್ಟಿರಲು ಸಾದ್ಯವಿಲ್ಲ ಎಂದು ಜಾರಕಿಹೊಳಿ ತಿಳಿಸಿದರು.

ಪಕ್ಷದಲ್ಲಿ ಭಿನ್ನರ, ಶೋಷಿತರ ಸಮಾವೇಶ ನಡೆಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ಸದ್ಯಕ್ಕಂತೂ ಅಂಥ ಯಾವುದೇ ಸಮಾವೇಶ ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಭವಿಷ್ಯದಲ್ಲಿ ಮಾಡಬಹುದು. ನೋಡೋಣ. ಆಗ ಎಲ್ಲಾ ಮಾಧ್ಯಮದವರಿಗೂ ತಿಳಿಸುತ್ತೇವೆ ಎಂದರು.

ಬಜೆಟ್‌ನಲ್ಲಿ 300 ಕಾಲುಸಂಕಕ್ಕೆ ಅನುದಾನ:

ಜಿಲ್ಲೆಯಲ್ಲಿ ಸೇತುವೆ ನಿರ್ಮಾಣ, ಹೊಸ ಕಾಲುಸಂಕಗಳ ನಿರ್ಮಾಣ, ರಸೆ ದುರಸ್ಥಿಗಳ ಬಗ್ಗೆ ಶಾಸಕ ರಿಂದ ಸಲಹೆ ಸೂಚನೆ ಬಂದಿದ್ದು, ಇವುಗಳ ಬಗ್ಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಕಳೆದ ಬಜೆಟ್‌ನಲ್ಲಿ 200 ಕಾಲುಸಂಕಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ. ಈ ಬಾರಿ 12 ಜಿಲ್ಲೆಗಳಲ್ಲಿ ಒಟ್ಟು 300 ಕಾಲುಸಂಕಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಲಾಗುತ್ತದೆ ಎಂದು ಅವರು ಹೇಳಿದರು. ಒಟ್ಟಾರೆ ನಮ್ಮ ಸರಕಾರದ ಅವಧಿಯಲ್ಲಿ ಮುಂದಿನ ಮೂರು ವರ್ಷದೊಳಗೆ ರಾಜ್ಯದಲ್ಲಿ ಅಗತ್ಯವಿರುವ ಎಲ್ಲಾ ಕಡೆಗಳಲ್ಲಿ ಕಾಲುಸಂಕದ ನಿರ್ಮಾಣ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಉಡುಪಿಗೆ ಹೊಸ ಪ್ರವಾಸಿ ಮಂದಿರ:

ಉಡುಪಿಯಲ್ಲಿ ಹೊಸ ಸುಸಜ್ಜಿತ ಪ್ರವಾಸಿ ಮಂದಿರ (ಐಬಿ) ನಿರ್ಮಾಣಕ್ಕೆ ಪ್ರಸ್ತಾಪ ಬಂದಿದ್ದು, ಇದಕ್ಕಾಗಿ ಡಿಪಿಆರ್ ಸಿದ್ಧ ಪಡಿಸುವಂತೆ ಸೂಚಿಸಲಾಗಿದೆ. ಈಗ ಪ್ರವಾಸಿ ಮಂದಿರ ಇರುವ ಜಾಗದಲ್ಲೇ ಈಗಾಗಲೇ ಕಟ್ಟಿರುವುದನ್ನು ಉಳಿಸಿಕೊಂಡು ಹೊಸದಾಗಿ ಸುಸಜ್ಜಿತ ಸುಮಾರು 20 ರೂಮುಗಳಿರುವ ಐಬಿಯನ್ನು ನಿರ್ಮಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆಯನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಸುಮಾರು 230 ಕೋಟಿ ರೂ. ಬಾಕಿ ಇರುವ ಬಗ್ಗೆ ಪ್ರಶ್ನಿಸಿದಾಗ, ಆದ್ಯತೆ ಮೇಲೆ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಿ ಅವುಗಳನ್ನು ನೀಡುತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News