ಭಟ್ಕಳ: ಐದು ವರ್ಷದ ಪುತ್ರಿಯೊಂದಿಗೆ ಮಹಿಳೆ ನಾಪತ್ತೆ
ಭಟ್ಕಳ: ಪತಿಯ ಮನೆಗೆ ತೆರಳುವುದಾಗಿ ತಂದೆಯ ಮನೆಯಿಂದ ಹೊರಟಿದ್ದ 31 ವರ್ಷದ ಮಹಿಳೆಯೊಬ್ಬರು ತಮ್ಮ ಐದು ವರ್ಷದ ಪುತ್ರಿಯೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಕುರಿತು ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ನಾಪತ್ತೆಯಾದವರನ್ನು ಹೊನ್ನಾವರ ತಾಲ್ಲೂಕಿನ ಮಂಕಿ ನಿವಾಸಿ ಫಾತಿಮಾ ಸಮರೀನ್ ಮೊಹಮ್ಮದ್ ಅಬ್ಬಾಸ್ ಕರ್ಡಿ (31) ಎಂದು ಗುರುತಿಸಲಾಗಿದೆ. ಅವರ ಐದು ವರ್ಷದ ಪುತ್ರಿ ಜುಲೈಖಾ ಪರ್ವೀನ್ ಕೂಡ ನಾಪತ್ತೆಯಾಗಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಫಾತಿಮಾ ಸಮರೀನ್ ಅವರು ಭಟ್ಕಳದ ಹೆಬಳೆ, ಹಿರೇಕೇರಿಯಲ್ಲಿರುವ ತಮ್ಮ ತಂದೆಯ ಮನೆಯಿಂದ ಪತಿಯ ಮನೆಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಆದರೆ ಪತಿಯ ಮನೆಗೂ ತಲುಪದೆ, ಮತ್ತೆ ತಂದೆಯ ಮನೆಗೂ ವಾಪಸ್ ಆಗಿಲ್ಲ.
ಕುಟುಂಬದವರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಫಾತಿಮಾ ಅವರ ತಂದೆ ಮೊಹಮ್ಮದ್ ಶಫಿ ಅವರು ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಹಾಗೂ ಅವರ ಪುತ್ರಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಇಬ್ಬರ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.