ಭಟ್ಕಳದಲ್ಲಿ ಹೊಸ ರಾಜಕೀಯ ಪಕ್ಷ ಘೋಷಿಸಿದ ನಟ ಚೇತನ್
ಭಟ್ಕಳ: ‘ಪರಿವರ್ತನಾ ಪರಿಸರವಾದ’ ಸಿದ್ಧಾಂತದಡಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಘೋಷಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನರ ಮೂಲಭೂತ ಸಮಸ್ಯೆಗಳನ್ನು ಅರಿತುಕೊಳ್ಳುವುದಾಗಿ ತಿಳಿಸಿದರು. ಸಮಸ್ಯೆಗಳ ಪರಿಹಾರಕ್ಕಾಗಿ ಜನಾಂದೋಲನ ರೂಪಿಸುವ ಉದ್ದೇಶವಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಮತ್ತು ಪರಿಸರ ಸಂರಕ್ಷಣೆ ಪಕ್ಷದ ಪ್ರಮುಖ ಆದ್ಯತೆಗಳಾಗಲಿವೆ ಎಂದರು.
ಸಾವಿರಾರು ಕೋಟಿ ರೂಪಾಯಿ ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪರಿಸರಕ್ಕೆ ಹಾನಿಯಾಗದ ಸೌರಶಕ್ತಿ ಸೇರಿದಂತೆ ಪರ್ಯಾಯ ವಿದ್ಯುತ್ ಉತ್ಪಾದನಾ ವಿಧಾನಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡುವ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಭಾಗ ಹಾಗೂ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಪರಿವರ್ತನಾ ಪರಿಸರವಾದ’ದ ಆಧಾರದ ಮೇಲೆ ಹೊಸ ರಾಜಕೀಯ ಮಾದರಿಯನ್ನು ರೂಪಿಸುವುದಾಗಿ ಹೇಳಿದರು.
ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ರೈತರ ಹಿತ ಕಾಪಾಡುವ ರೀತಿಯಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಚೇತನ್ ಅವರನ್ನು ಸನ್ಮಾನಿಸಿದರು. ದಲಿತ ಮುಖಂಡರಾದ ಮಾದೇವ ಬಾಕಡ್, ವೆಂಕಟೇಶ, ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೊಂಕಾ ಬಂದರು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಚೇತನ್ ಆರೋಪಿಸಿದರು.