ವಿದೇಶದಲ್ಲಿ ಉದ್ಯೋಗದ ಆಮಿಷ: ಮೂವರ ವಿರುದ್ಧ ಪ್ರಕರಣ ದಾಖಲು
ಭಟ್ಕಳ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನೊಬ್ಬನಿಂದ 2.49 ಲಕ್ಷ ಹಣ ಹಾಗೂ ಪಾಸ್‌ಪೋರ್ಟ್ ಪಡೆದು ವಂಚಿಸಿದ ಆರೋಪದಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕಾಯ್ಕಿಣಿ ಜನತಾ ಕಾಲೊನಿಯ ಅನಿಲ್ ಮಂಜಯ್ಯ ನಾಯ್ಕ ದೂರು ನೀಡಿದ್ದು, ಭಟ್ಕಳದ ಮುಗ್ದುಂ ಕಾಲೊನಿಯ ಅಯ್ಯೂಬ್ ಅಲಿ, ಉಮ್ಮರ್ ಸ್ಟ್ರೀಟ್‌ನ ಅಬ್ದುಲ್ ಮುತಾಲಿಬ್ ಕುಂದನಗೂಡ ಹಾಗೂ ಅಲ್ತಾಫ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಆರೋಪಿಗಳು ವಿದೇಶದಲ್ಲಿ ಉತ್ತಮ ಉದ್ಯೋಗ ಕಲ್ಪಿಸುವುದಾಗಿ ಭರವಸೆ ನೀಡಿ, ಹಂತ ಹಂತವಾಗಿ 2.49 ಲಕ್ಷ ನಗದು ಹಾಗೂ ಪಾಸ್‌ಪೋರ್ಟ್ ಪಡೆದಿದ್ದಾರೆ. ಬಳಿಕ ಉದ್ಯೋಗ ಒದಗಿಸದೇ, ಹಣ ಹಾಗೂ ಪಾಸ್‌ಪೋರ್ಟ್ ಹಿಂತಿರುಗಿಸದೆ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ, ಉದ್ಯೋಗ ಕಲ್ಪಿಸುವುದಾಗಿ ನಂಬಿಸಲು ನಕಲಿ ದಾಖಲೆಗಳನ್ನೂ ತೋರಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.