ಮುರ್ಡೇಶ್ವರ: ಹೆದ್ದಾರಿಯಲ್ಲಿ ವೇಗ ಮಿತಿ ಉಲ್ಲಂಘನೆ ತಡೆಗೆ ರಾಡಾರ್ ಗನ್ ಮೂಲಕ ತಪಾಸಣೆ
ಭಟ್ಕಳ: ಅತಿವೇಗದ ವಾಹನ ಸಂಚಾರದಿಂದ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಮುರ್ಡೇಶ್ವರ ಪೊಲೀಸರು ಶನಿವಾರ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸ್ಪೀಡ್ ರಾಡಾರ್ ಗನ್ ಬಳಸಿ ವಿಶೇಷ ತಪಾಸಣೆ ನಡೆಸಿದರು.
ಹೆದ್ದಾರಿಯ ನಿಗದಿತ ಸ್ಥಳದಲ್ಲಿ ಸಂಚರಿಸುತ್ತಿದ್ದ ವಾಹನಗಳ ವೇಗವನ್ನು ರಾಡಾರ್ ಗನ್ ಮೂಲಕ ಪರಿಶೀಲಿಸಲಾ ಯಿತು. ಈ ಕಾರ್ಯಾಚರಣೆಯ ಉದ್ದೇಶ ವಾಹನ ಸವಾರರು ನಿಗದಿತ ವೇಗ ಮಿತಿಯನ್ನು ಪಾಲಿಸುವಂತೆ ಜಾಗೃತಿ ಮೂಡಿಸುವುದರ ಜೊತೆಗೆ, ಅತಿವೇಗದಿಂದ ಸಂಭವಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟುವುದಾಗಿದೆ ಎಂದು ಮುರ್ಡೇಶ್ವರ ಪೊಲೀಸ್ ಠಾಣೆಯ ಉಪನಿರೀಕ್ಷಕ ಹನುಮಂತ ಬಿರಾದಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿಯೂ ಅನಿರೀಕ್ಷಿತವಾಗಿ ವಿವಿಧ ಸ್ಥಳಗಳಲ್ಲಿ ಇಂತಹ ವೇಗ ತಪಾಸಣೆಗಳನ್ನು ನಡೆಸಲಾಗು ವುದು ಎಂದು ಅವರು ಹೇಳಿದರು.
ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು ಚಾಲಕರ ಜೀವಕ್ಕೆ ಮಾತ್ರವಲ್ಲದೆ ಇತರ ರಸ್ತೆ ಬಳಕೆ ದಾರರ ಸುರಕ್ಷತೆಗೂ ಅಪಾಯಕಾರಿಯಾಗಿದೆ. ಆದ್ದರಿಂದ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ನಿಗದಿತ ವೇಗ ಮಿತಿಯಲ್ಲೇ ವಾಹನ ಚಲಾಯಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಸಹಕರಿಸ ಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.