ಸರಗಳ್ಳತನ ಪ್ರಕರಣ: 24 ಗಂಟೆಯೊಳಗೆ ಆರೋಪಿ ಸೆರೆ
ಸಾಂದರ್ಭಿಕ ಚಿತ್ರ
ಭಟ್ಕಳ: ದೊಡ್ಡ ಬಲಸೆ ಕ್ರಾಸ್ ಸಮೀಪ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು 24 ಗಂಟೆಯೊಳಗೆ ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ರೂ. 3 ಲಕ್ಷ ಮೌಲ್ಯದ ಚಿನ್ನದ ಸರ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್ ಫೋನ್‌ನ್ನು ಜಪ್ತಿ ಮಾಡಲಾಗಿದೆ.
ಜುಲೈ 20ರಂದು ರಾತ್ರಿ ದೊಡ್ಡ ಬಲಸೆ ನಿವಾಸಿ ಮಾದೇವ ನಾರಾಯಣ ನಾಯ್ಕ (56) ಅವರು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 22 ಗ್ರಾಂ ತೂಕದ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಹಲ್ಲಂದಿ–ಕಟಗಾರಕೊಪ್ಪ ನಿವಾಸಿ ನಾಗರಾಜ ಗಣಪತಿ ಗೊಂಡ (29) ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ. ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಹಣಮಂತ ಬಿರಾದಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.