ಭಟ್ಕಳ| ಪರೀಕ್ಷಾ ಅಕ್ರಮ ತಡೆಗೆ ಆಗ್ರಹಿಸಿ ಪ್ರತಿಭಟನೆ; ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹ
ಭಟ್ಕಳ: ನೀಟ್ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶೈಕ್ಷಣಿಕ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಮುಹಮ್ಮದ್ ಗೌಸ್ ಶೇಖ್, "ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಕನಸಿನೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಅಕ್ರಮಗಳಿಂದ ಅವರ ಭವಿಷ್ಯಕ್ಕೆ ಧಕ್ಕೆ ಯಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಪರಿಶ್ರಮ ವ್ಯರ್ಥವಾಗುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ವಿದ್ಯಾರ್ಥಿಗಳು ಮಿನಿ ವಿಧಾನಸೌಧಕ್ಕೆ ತೆರಳಿ, ಉಪವಿಭಾಗಾಧಿಕಾರಿಗಳ (ಎಸಿ) ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಪರಿಣಾಮ ಕಾರಿ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಅಕ್ರಮಗಳಿಗೆ ಶಾಶ್ವತ ತಡೆ ಒಡ್ಡುವ ವ್ಯವಸ್ಥೆ ರೂಪಿಸಬೇಕು. ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಪ್ರತಿಪಾದಿಸಿರುವ ಶೈಕ್ಷಣಿಕ ಸುಧಾರಣೆಯ ಅಂಶಗಳನ್ನು ಪರಿಗಣಿಸಿ ಅಗತ್ಯ ಸುಧಾರಣೆ ಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ.
"ಈ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆ ಇದಾಗಿದೆ" ಎಂದು ವಿದ್ಯಾರ್ಥಿ ಮುಖಂಡರು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ, ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಸೈಯ್ಯದ್ ಸನಾವುಲ್ಲಾಹ್, ಸೈಯ್ಯದ್ ಅರಸಲಾನ್, ಶಾಹೀನ್ ರಿಯಾಝ್, ನಖಿಯಾ ಶೇಖ್, ಮರ್‍ವಾ ಮತ್ತಿತರರು ಭಾಗವಹಿಸಿದ್ದರು.