Dandeli | ಝಿಪ್‌ಲೈನ್ ಅವಘಡ : 40 ಅಡಿ ಎತ್ತರದಿಂದ ಬಿದ್ದು ಯುವಕ ಗಂಭೀರ ಗಾಯ; ವಿಡಿಯೋ ವೈರಲ್
ದಾಂಡೇಲಿ : ಪ್ರವಾಸದ ಸಂಭ್ರಮಕ್ಕಾಗಿ ದಾಂಡೇಲಿಗೆ ತೆರಳಿದ್ದ ವಿಜಯಪುರದ ಯುವಕನೊಬ್ಬ ಝಿಪ್‌ಲೈನ್ ನಲ್ಲಿ ಹೋಗುವ ವೇಳೆ ಸುಮಾರು 30–40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ ನಗರದ ನಿವಾಸಿ ಕುಬೇರ್ ಸುರಪುರ ಅವರು ಜು.3ರಂದು ಸಹೋದರ ಪ್ರಶಾಂತ ಸುರಪುರ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ಗೆ ತೆರಳಿದ್ದರು. ಝಿಪ್‌ಲೈನ್ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವೇಳೆ ಸುರಕ್ಷತಾ ಲಾಕ್ ಕಟ್ ಆಗಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ಭೀಕರ ದೃಶ್ಯವನ್ನು ಸಹೋದರ ಪ್ರಶಾಂತ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಅಪಘಾತದಲ್ಲಿ ಕುಬೇರ್ ಅವರ ಎರಡೂ ಕೈ ಹಾಗೂ ಎರಡೂ ಕಾಲಿನ ಎಲುಬುಗಳು ಮುರಿದಿದ್ದು, ನರಗಳಿಗೂ ತೀವ್ರ ಹಾನಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಗಾಯಾಳುವನ್ನು ಮೊದಲು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ವಿಜಯಪುರದ ಖಾಸಗಿ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕೈ ಮತ್ತು ಕಾಲುಗಳಿಗೆ ಇನ್ನೂ ಹೆಚ್ಚಿನ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೇ ಅವಘಡಕ್ಕೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಪಘಾತದ ಬಳಿಕ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದ ರೆಸಾರ್ಟ್ ಆಡಳಿತ ನಂತರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕುಟುಂಬದ ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರೆಸಾರ್ಟ್ ಮ್ಯಾನೇಜರ್, ಅಪಘಾತ ಸಂಭವಿಸಿದ್ದನ್ನು ಒಪ್ಪಿಕೊಂಡಿದ್ದು, ಇದು ನಿರ್ಲಕ್ಷ್ಯದಿಂದಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ವಿಜಯಪುರಕ್ಕೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಈ ಘಟನೆ ರಾಜ್ಯದ ಸಾಹಸ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಸುರಕ್ಷತಾ ಮಾನದಂಡಗಳ ಅನುಷ್ಠಾನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.