ಭಟ್ಕಳ | ಬಸ್ತಿ - ಕೈಕಿಣಿ ಜಂಕ್ಷನ್ ಅಪಘಾತ ಸ್ಥಳಕ್ಕೆ ಎಸ್‌ಪಿ ಭೇಟಿ; ಸುರಕ್ಷತಾ ಕ್ರಮ ಬಲಪಡಿಸಲು ಸೂಚನೆ

Update: 2026-07-18 17:40 IST

ಭಟ್ಕಳ: ಮುರುಡೇಶ್ವರ ಸಮೀಪದ ಬಸ್ತಿ–ಕೈಕಿಣಿ ಗ್ರಾಮ ಪಂಚಾಯಿತಿ ಜಂಕ್ಷನ್‌ನಲ್ಲಿ ಬುಧವಾರ ಸಂಭವಿಸಿದ  ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್‌.ಎಂ. ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಶನಿವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತಕ್ಕೆ ಕಾರಣವಾದ ಅಂಶಗಳು, ರಾಷ್ಟ್ರೀಯ ಹೆದ್ದಾರಿ–66ರ ಪ್ರಸ್ತುತ ಸ್ಥಿತಿ, ವಾಹನ ಸಂಚಾರದ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅವರು ಸ್ಥಳದಲ್ಲೇ ಪರಿಶೀಲಿಸಿದರು. ಈ ವೇಳೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸಂಚಾರ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ, ಅಪಘಾತ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸುವಂತೆ ಹಾಗೂ ರಸ್ತೆ ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಪರಿಶೀಲನೆ ವೇಳೆ ರಸ್ತೆ ವಿನ್ಯಾಸ, ವಾಹನ ಸಂಚಾರದ ಓಡಾಟ ಹಾಗೂ ಅಪಘಾತಕ್ಕೆ ಕಾರಣವಾಗಬಹುದಾದ ಅಪಾಯದ ಸ್ಥಳಗಳನ್ನು ಕೂಡ ಪರಿಶೀಲಿಸಲಾಯಿತು. ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವಂತೆ ಹಾಗೂ ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಸ್‌ಪಿ ನಿರ್ದೇಶನ ನೀಡಿದರು.

ಬುಧವಾರ ಮಧ್ಯಾಹ್ನ ಬಸ್ತಿ–ಕೈಕಿಣಿ ಗ್ರಾಮ ಪಂಚಾಯಿತಿ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಹಿಂದಿ ನಿಂದ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು.

ಘಟನೆಯ ಬಳಿಕ ಸ್ಥಳಕ್ಕೆ ಜಮಾಯಿಸಿದ್ದ ಸಾರ್ವಜನಿಕರು, ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆ ರೀತಿಯಲ್ಲಿ ನಡೆದಿರುವುದೇ ನಿರಂತರ ಅಪಘಾತಗಳಿಗೆ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ರಸ್ತೆ ದೋಷಗಳನ್ನು ತಕ್ಷಣ ಸರಿಪಡಿಸುವುದು, ಅಪಘಾತ ತಡೆಗೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News