×
Ad

ಭಟ್ಕಳ: ಐಎನ್‌ಎಫ್ ಉಚಿತ ಹೃದಯ ತಪಾಸಣಾ ಶಿಬಿರಕ್ಕೆ 1,050 ಮಂದಿ ನೋಂದಣಿ

Update: 2026-07-15 22:42 IST

ಭಟ್ಕಳ: ಇಂಡಿಯನ್ ನವಾಯಿತ್ ಫೋರಂ (ಐಎನ್‌ಎಫ್) ವತಿಯಿಂದ ಜುಲೈ 18 ಮತ್ತು 19ರಂದು ನಗರದ ಬಂದರ್‌ರೋಡ್‌ನ ಎಂ.ಎಂ. ಸಿದ್ದೀಕ್ ಸಭಾಂಗಣದಲ್ಲಿ ಆಯೋಜಿಸಿರುವ ಉಚಿತ ಸಮಗ್ರ ಹೃದಯ ಆರೋಗ್ಯ ತಪಾಸಣಾ ಶಿಬಿರ ʼಒನ್ ಹಾರ್ಟ್–ಒನ್ ಲೈಫ್’ಗೆ ನಿಗದಿಪಡಿಸಿದ್ದ 1,050 ನೋಂದಣಿಗಳು ಪೂರ್ಣಗೊಂಡಿದ್ದು, ಇನ್ನು ಮುಂದೆ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎನ್‌ಎಫ್ ಪ್ರಧಾನ ಕಾರ್ಯದರ್ಶಿ ಆದಿಲ್ ನಗರಮಠ, ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಯುವಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಹಠಾತ್ ಹೃದಯಾಘಾತದಿಂದಾಗುವ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಶಿಬಿರವನ್ನು ಸಂಪೂರ್ಣ ಜನಸೇವೆಯ ಉದ್ದೇಶದಿಂದ ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ ಕರ್ನಾಟಕ ಮತ್ತು ಕೇರಳದ ಖ್ಯಾತ ಹೃದ್ರೋಗ ತಜ್ಞರು ಹಾಗೂ ವೈದ್ಯಕೀಯ ತಂಡ ಭಾಗವಹಿಸಲಿ ದ್ದಾರೆ. ಜುಲೈ 18ರಂದು ಹಿರಿಯ ವೈದ್ಯರು ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಿದ್ದು, ಅಗತ್ಯವಿರುವವರನ್ನು ಮಾತ್ರ ಜುಲೈ 19ರಂದು ಹೃದ್ರೋಗ ತಜ್ಞರ ವಿಶೇಷ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಶಿಬಿರದ ಸಂಚಾಲಕ ಹಾಗೂ ಐಎನ್‌ಎಫ್ ಕಾರ್ಯದರ್ಶಿ ಸೈಯ್ಯದ್ ಗಫ್ರಾನ್ ಲಂಕಾ ಮಾತನಾಡಿ, ಜುಲೈ 8ರಂದು ಆರಂಭವಾದ ನೋಂದಣಿ ನಿರೀಕ್ಷೆಗೂ ಮೀರಿ ಸ್ಪಂದನೆ ಪಡೆದಿದ್ದು, ನಿಗದಿತ 1,050 ಸ್ಥಾನಗಳು ಪೂರ್ಣಗೊಂಡಿವೆ. ನೋಂದಾಯಿಸಿದವರಲ್ಲಿ 141 ಮಂದಿ ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ನೇರವಾಗಿ ಹೃದ್ರೋಗ ತಜ್ಞರಿಂದ ಪರೀಕ್ಷೆ ನಡೆಸಲಾಗುವುದು ಎಂದರು.

ನೋಂದಾಯಿಸಿಕೊಂಡು ಇನ್ನೂ ರಕ್ತ ಪರೀಕ್ಷೆ ಮಾಡಿಸದವರು ಜುಲೈ 16ರ ಸಂಜೆ 7 ಗಂಟೆಯೊಳಗೆ ವೆಲ್‌ಫೇರ್ ಆಸ್ಪತ್ರೆ ಪ್ರಯೋಗಾಲಯ ಅಥವಾ ನೂರ್ ಮಸೀದಿ ಸಮೀಪದ ಮೆಡಿಲ್ಯಾಬ್ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ನೋಂದಾಯಿತರು ಮೊಬೈಲ್‌ಗೆ ಕಳುಹಿಸಿರುವ ಟೋಕನ್‌ನಲ್ಲಿ ಸೂಚಿಸಿರುವ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಶಿಬಿರಕ್ಕೆ ಆಗಮಿಸಿ, ಶಿಸ್ತಿನಿಂದ ಸಹಕರಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಐಎನ್‌ಎಫ್ ಆಡಳಿತ ಮಂಡಳಿ ಸದಸ್ಯ ತನ್ವೀರ್ ಮೊಟ್ಟಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News