×
Ad

ಮುರ್ಡೇಶ್ವರ | ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ವಿನ್ಯಾಸ ಖಂಡಿಸಿ ಸಾರ್ವಜನಿಕರ ಪ್ರತಿಭಟನೆ

Update: 2026-07-15 15:07 IST

ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ–66ರ ಮುರ್ಡೇಶ್ವರ ಸಮೀಪದ ಬಸ್ತಿ ಜಂಕ್ಷನ್ ನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಮುರ್ಡೇಶ್ವರ ಸಮೀಪದ ಸಬ್ಬತ್ತಿ ನಿವಾಸಿ ಕೃಷ್ಣ ಶನಿಯಾರ್ ನಾಯ್ಕ (55) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಬೆನ್ನಲ್ಲೇ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ವಿನ್ಯಾಸವೇ ಇಲ್ಲಿ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು.

ಪೊಲೀಸ್ ಮೂಲಗಳ ಪ್ರಕಾರ, ಕೃಷ್ಣ ಶನಿಯಾರ್ ನಾಯ್ಕ ಭಟ್ಕಳದಿಂದ ಮುರ್ಡೇಶ್ವರದತ್ತ ಬೈಕಿನಲ್ಲಿ ತೆರಳುತ್ತಿದ್ದರು. ಬಸ್ತಿ ಜಂಕ್ಷನ್ ನಲ್ಲಿ ಹೆದ್ದಾರಿಯನ್ನು ದಾಟಲು ನಿಂತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣ ಶನಿಯಾರ್ ನಾಯ್ಕ ರಸ್ತೆಗೆ ಎಸೆಯಲ್ಪಟ್ಟು, ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರತಿಭಟನೆ

ಘಟನೆಯ ಬಳಿಕ ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ರಾಷ್ಟ್ರೀಯ ಹೆದ್ದಾರಿ–66ರ ಚತುಷ್ಪಥ ಕಾಮಗಾರಿಯನ್ನು ಅವೈಜ್ಞಾನಿಕ ಹಾಗೂ ಕಳಪೆ ರೀತಿಯಲ್ಲಿ ರೂಪಿಸಿರುವುದರಿಂದ ಈ ಜಂಕ್ಷನ್ ನಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರು ಲಾರಿಯಡಿ ಸಿಲುಕಿದ್ದ ಬೈಕ್ ಹಾಗೂ ಮೃತದೇಹವನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಅವಕಾಶ ನೀಡದೆ ತೀವ್ರ ವಿರೋಧ ವ್ಯಕ್ತಪಡಿಸಿದರು .

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ನಿರ್ವಹಿಸುತ್ತಿರುವ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಮುರ್ಡೇಶ್ವರ ಹಾಗೂ ಭಟ್ಕಳ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಉಪವಿಭಾಗಾಧಿಕಾರಿ (ಡಿವೈಎಸ್ಪಿ), ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಐಆರ್ಬಿ ಸಂಸ್ಥೆಯ ಎಂಜಿನಿಯರ್ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ್ದಾಗಿ ತಿಳಿದುಬಂದಿದೆ.

ಈ ಕುರಿತಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News