×
Ad

ನಿಷೇಧಿತ ಪ್ರದೇಶದಲ್ಲಿ ಮೀನುಗಾರಿಕೆ ಆರೋಪ: ಬೋಟ್ ದಡಕ್ಕೆ ಎಳೆದು ತಂದ ಪ್ರಕರಣಕ್ಕೆ ಹೊಸ ತಿರುವು

Update: 2024-02-29 23:03 IST

ಭಟ್ಕಳ: ಎರಡು ದಿನಗಳ ಹಿಂದೆ ಭಟ್ಕಳ ಸಮುದ್ರದ ನಿಷೇಧಿತ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದಲ್ಲಿ ಭಟ್ಕಳದ ಕೆಲ ಮೀನುಗಾರರು ಮಂಗಳೂರು ಮತ್ತು ಮಲ್ಪೆಯ ಮೀನುಗಾರಿಕಾ ಬೋಟುಗಳನ್ನು ಎಳೆದು ತಂದಿರುವ ಘಟನೆ ಈಗ ಹೊಸ ತಿರುವು ಪಡೆದುಕೊಂಡಿದ್ದು, ತಮ್ಮ ಬೋಟ್ ಅಪಹರಣವಾಗಿದ್ದು ಲಕ್ಷಾಂತರ ರೂ. ಮೌಲ್ಯದ ಮೀನು ಮತ್ತು ಡೀಸೆಲ್ ಕಳ್ಳತನವಾಗಿದೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಲ್ಪೆಯ ಚೇತನ್ ಸಾಲ್ಯಾನ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ಫೆ.19ರಂದು ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ನಲ್ಲಿ ಕೆಲವು ಮೀನುಗಾರರು ತೆರಳಿದ್ದರು. ಫೆಬ್ರವರಿ 27ರಂದು ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳೊಂದಿಗೆ ಹಿಂದಿರುಗುತ್ತಿದ್ದಾಗ ಸುಮಾರು 25 ಅಪರಿಚಿತ ಜನರ ತಂಡವು ದೋಣಿಯ ಮೇಲೆ ದಾಳಿ ನಡೆಸಿ ಮೀನುಗಾರರೊಂದಿಗೆ ದೋಣಿಯನ್ನು ದಡಕ್ಕೆ ಎಳೆದುಕೊಂಡು ಹೋಯಿತು. ಆ ಸಮಯದಲ್ಲಿ, ದೋಣಿಯಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ ಮೀನು ಮತ್ತು 5,76,700 ರೂ.ಗಳ ಡೀಸೆಲ್ ಇತ್ತು, ಅದನ್ನು ಅಪಹರಣಕಾರರು ಲೂಟಿ ಮಾಡಿದ್ದಾರೆ. ಇದಲ್ಲದೆ, ಅಪಹರಣಕ್ಕೊಳಗಾದ ಮೀನುಗಾರರನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಲಾಗಿದೆ ಎಂದು ದೂರನ್ನು ದಾಖಲಿಸಿದ್ದಾರೆ.

ಈ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರದೀಪ್ ಮತ್ತು ಅವರ ತಂಡ ಭಟ್ಕಳ ಬಂದರಿಗೆ ಆಗಮಿಸಿ ಸಂಬಂಧಪಟ್ಟ ದೋಣಿಗಳು ಮತ್ತು ಅಪಹರಣಕ್ಕೊಳಗಾದ ಮೀನುಗಾರರನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಭಟ್ಕಳ ಬಂದರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News