×
Ad

ಭಟ್ಕಳ: ತಾಯಿ - ಮಗಳು ಆತ್ಮಹತ್ಯೆ

Update: 2024-07-16 19:02 IST

ಭಟ್ಕಳ: ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ನೊಂದ ತಾಯಿ ತಾನೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಯಲ್ವಡಿಕವೂರ್ ಗ್ರಾ.ಪಂ. ವ್ಯಾಪ್ತಿಯ ಸರ್ಪನಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ.

ಸರ್ಪನಕಟ್ಟೆ ಗೋರಿಕಲ್ ಮನೆಯ ನಿವಾಸಿ ಕೃಷ್ಣಮ್ಮ ನಾರಾಯಣ ನಾಯ್ಕ(55) ಹಾಗೂ ಇವರ ಪುತ್ರಿ ಮಾದೇವಿ ದೊಡ್ಡಯ ನಾಯ್ಕ (37) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.

ಸೋಮವಾರದಂದು ಮನೆಯ ಸದಸ್ಯರೆಲ್ಲರೂ ಮದುವೆ ಸಮಾರಂಭಕ್ಕೆ ಹೋಗುದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮೊದಲು ಮಾದೇವಿ (ಮಗಳು) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತಾಯಿ ಕೃಷ್ಣಮ್ಮ ಕೂಡ ತನ್ನ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾದೇವಿಯವರಿಗೆ ವಿವಾಹ ಆಗಿ, ಇಬ್ಬರು ಮಕ್ಕಳಿದ್ದಾರೆ. ಕಳೆದ 12 ವರ್ಷಗಳಿಂದ ತನ್ನ ತಾಯಿಯ ಮನೆಯಲ್ಲಿ ಬೇರೆಯಾಗಿಯೆ ವಾಸವಿದ್ದರು. ರವಿವಾರ ತಾಯಿ ಮತ್ತು ಮಗಳ ನಡುವೆ ಮನಸ್ತಾಪ ಉಂಟಾಗಿದೆ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಡಿರಬಹುದು ಎಂದು ಶಂಕಿಸಲಾಗಿದೆ.

ಮಾದೇವಿ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ಅದರಲ್ಲಿ ಮೃತದೇಹವನ್ನು ತಾಯಿ ಹಾಗೂ ಸಹೋದರರಿಗೆ ತೋರಿಸಬಾರದು ಎಂದು ಹೇಳಿರುವುದು ಪತ್ತೆಯಾಗಿದೆ. ಮಾದೇವಿಗೆ 12 ವರ್ಷದ ಬಾಲಕ ಮತ್ತು 13 ವರ್ಷದ ಬಾಲಕಿ ಇದ್ದಾರೆ.

ಘಟನಾ ಸ್ಥಳಕ್ಕೆ ಭಟ್ಕಳ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News